ಜನಸಂಪರ್ಕ ಸಭೆಯಲ್ಲಿ ದೂರಿನ ಮಳೆ

ಹನೂರು : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಜನರಿಂದ ದೂರುಗಳ ಸುರಿಮಳೆಯೇ ಹರಿದು ಬಂತು.

ಕೊಂಗರಹಳ್ಳಿ ಗ್ರಾಮದ ಕೋಂದಡರಾಮು ಮಾತನಾಡಿ, ಗ್ರಾಮದ ಮೂಲಕ ಗುಂಡಾಲ್ ಜಲಾಶಯಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟಿದೆ. ಗುಂಡಿಗಳು ಸೃಷ್ಟಿಯಾಗಿದ್ದು, ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಬೈಲೂರು ಗ್ರಾಮದ ಬಸವಯ್ಯ ಮಾತನಾಡಿ, ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಶೌಚಗೃಹ ನಿರ್ಮಿಸಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರೆ, ಕಳೆದ ನಾಲ್ಕೈದು ತಿಂಗಳಿನಿಂದ ನಮಗೆ ಪಿಂಚಣಿ ಬರುತ್ತಿಲ್ಲ. ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಶಾಗ್ಯ ಗ್ರಾಮದ ಹಲವು ವೃದ್ಧ ಮಹಿಳೆಯರು ಅಳಲು ತೋಡಿಕೊಂಡರು.

ಕ್ಷೇತ್ರದ 85 ಅರಬಗೆರೆ ಗ್ರಾಮದಿಂದ ಕುರುಬುಡಿಗ್ಗಿ-ತೋಮನಶೆಟ್ಟಿ ಕೆರೆ ಮಾರ್ಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಅರಬಗೆರೆ ಗ್ರಾಮಸ್ಥರು ಒತ್ತಾಯಿಸಿದರೆ, ಚಿಗಾತಪುರ ಗ್ರಾಮದಲ್ಲಿ ಕೆರೆಯ 1.75 ಎಕರೆ ಪ್ರದೇಶವನ್ನು ಮಾರಿಮುತ್ತು ಎಂಬುವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮದ ಮಹದೇವು ದೂರಿದರು.

ಪಾಳ್ಯ ಗ್ರಾಮದಲ್ಲಿ ಸರ್ವೇ ನಂಬರ್ 66ರಲ್ಲಿನ ಸರ್ಕಾರಿ ಜಾಗವನ್ನು ಶಿವಮೂರ್ತಿ ಎಂಬುವರು ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಎಸಿ ಅವರಿಗೆ ಈ ಹಿಂದೆ ದೂರು ನೀಡಲಾಗಿದೆ. ಆದರೆ ಕ್ರಮವಹಿಸಿಲ್ಲ ಎಂದು ರಂಗಸ್ವಾಮಿ ದೂರಿದರು.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹಾಳಾಗಿದೆ. ಬಸ್ ಸೌಕರ್ಯವಿಲ್ಲ. ಇದರಿಂದ ಜನತೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ ಎಂದು ಅಲಗುಮೂಲೆ ಗ್ರಾಮಸ್ಥರು ದೂರಿದರು. ಬಂಡಳ್ಳಿಯ ಅಬ್ದುಲ್ ಶಫೀರ್ ಮಾತನಾಡಿ, ಹನೂರು-ಶಾಗ್ಯ ಮಾರ್ಗಮಧ್ಯೆ ಮುಳುಗು ಸೇತುವೆಗಳಿದ್ದು, ಮಳೆ ಬಂದ ವೇಳೆ ಯಥೇಚ್ಛವಾದ ನೀರು ರಸ್ತೆ ಮೇಲೆ ಹರಿಯುತ್ತದೆ. ಈ ವೇಳೆ ಸಂಚಾರ ಸಾಧ್ಯವಿಲ್ಲ. ಆದ್ದರಿಂದ ಮೇಲ್ಮಟ್ಟದ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದರು.

ಹೊಸದೊಡ್ಡಿಯ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಕ್ಷೇತ್ರದ ಕಂಬಿಗುಡ್ಡೆ ಗ್ರಾಮದಲ್ಲಿ 62 ಕುಟುಂಬ ಹಾಗೂ ಕತ್ತೇಕಾಲು ಪೋಡಿನಲ್ಲಿ ಸುಮಾರು 100 ಗಿರಿಜನ ಕುಟುಂಬಗಳಿವೆ. ಆದರೆ ಸಮರ್ಪಕ ಮೂಲ ಸೌಕರ್ಯವಿಲ್ಲ. ಲೊಕ್ಕನಹಳ್ಳಿ ಜಿಪಂ ವ್ಯಾಪ್ತಿಯಲ್ಲಿ ಪಿಯುಸಿ ಶಿಕ್ಷಣ ಪಡೆದ ನಂತರ ವಿದ್ಯಾಭ್ಯಾಸ ಮಾಡಲಾಗದ ಹೆಣ್ಣು ಮಕ್ಕಳು ಸ್ವ ಉದ್ಯೋಗ ಮಾಡಲು ಇಚ್ಛಿಸಿದ್ದಾರೆ. ಹೀಗಾಗಿ ವೃತ್ತಿಪರ ಚಟುವಟಿಕೆ ಕೈಗೊಳ್ಳಲು ಕೌಶಲಾಧಾರಿತ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.

ಮಾವತ್ತೂರು-ಹೊನ್ನಮೇಟಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ. ಕೌಳಿಹಳ್ಳ ಜಲಾಶಯ ಶಿಥಿಗೊಂಡಿದ್ದು, ನೀರು ಸೋರಿಕೆಯಾಗುತ್ತಿದೆ ಎಂದು ದೂರಿದರು. ಲೊಕ್ಕನಹಳ್ಳಿ ವ್ಯಾಪ್ತಿಯಲ್ಲಿ ಬಹುಪಾಲು ರೈತರು ಜೋಳ ಬಿತ್ತನೆ ಮಾಡಿದ್ದಾರೆ. ಆದರೆ ಫಸಲಿಗೆ ಸೈನಿಕ ಹುಳುಬಾಧೆ ಕಾಣಿಕೊಂಡಿದ್ದು, ರೋಗ ಹತೋಟಿಗೆ ಔಷಧಗಳನ್ನು ಕೊಡಿಸಬೇಕೆಂದು ಮನವಿ ಮಾಡಿದರು.

ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ಕಾವೇರಿ, ಸಾರ್ವಜನಿಕರ ಅರ್ಜಿಗಳನ್ನು ಆದ್ಯತಾನುಸಾರ ಸಕಾಲದಲ್ಲಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಾಸಕ ಆರ್.ನರೇಂದ್ರ ಮಾತನಾಡಿದರು. ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯೆ ಮರಗದಮಣಿ, ತಾಪಂ ಅಧ್ಯಕ್ಷ ಆರ್.ರಾಜು, ಪಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಬಸವರಾಜು, ತಹಸೀಲ್ದಾರ್ ಶಿವರಾಮ್ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.