ಕಾಳ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಭಸ್ಮ

ಹನೂರು: ಬೈಲೂರು ಬಳಿಯ ಬಿಆರ್‌ಟಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚಿಗೆ ನೂರಾರು ಎಕರೆ ಕಾಡು ಭಸ್ಮವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ಸತತ ಪರಿಶ್ರಮದಿಂದ ಬೆಂಕಿ ತಹಬಂದಿಗೆ ಬಂದಿದೆ.

ಎರಡು ದಿನಗಳ ಹಿಂದೆ ಕೊಳ್ಳೇಗಾಲ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಬಿಆರ್‌ಟಿ ಅರಣ್ಯ ಪ್ರದೇಶದ ಮಾವತ್ತೂರು ಬೀಟ್, ಕೆ.ಕೆ.ಡ್ಯಾಂ, ನಲ್ಲಿಕತ್ರಿ ಪೋಡು, ಸೇಬಿನ ಕೊಬೆ ಅರಣ್ಯ ಪ್ರದೇಶ ಸೇರಿ ವಿವಿಧೆಡೆ ವ್ಯಾಪಿಸಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ನೂರಾರು ಮರಗಳು, ಲಂಟಾನಾ ಗಿಡಗಳು ಸುಟ್ಟು ಹೋಗಿವೆ. ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯರ ಸಹಕಾರ ಪಡೆದು ಎರಡ್ಮೂರು ದಿನಗಳಿಂದ ಪ್ರಯತ್ನಿಸಿ ಮಂಗಳವಾರ ತಹಬಂದಿಗೆ ತರುವಲಿ ಯಶಸ್ವಿಯಾದರು.
ಆರ್‌ಎಫ್‌ಒ ಶಿವರಾಮಯ್ಯ ವಿಜಯವಾಣಿಯೊಂದಿಗೆ ಮಾತನಾಡಿ, ಬೆಂಕಿ ನಂದಿಸಲು ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸ್ಥಳೀಯ ಜನರ ಸಹಕಾರ ಪಡೆಯಲಾಯಿತು ಎಂದು ತಿಳಿಸಿದರು.

ಬರೋಡ ಬಂಡೆ ಬೆಟ್ಟಕ್ಕೆ ಬೆಂಕಿ : ಮಲೆ ಮಹದೇಶ್ವರ ವನ್ಯಧಾಮದ ಕಾಂಚಳ್ಳಿ ಪಚ್ಚೆದೊಡ್ಡಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡು ಬರೋಡ ಬಂಡೆ ಬೆಟ್ಟ ಸುಟ್ಟು ಭಸ್ಮ ವಾಗಿದೆ.

ಮಂಗಳವಾರ ಮಧ್ಯಾಹ್ನ ಕಾಂಚಳ್ಳಿ ಪಚ್ಚೆದೊಡ್ಡಿ ಅರಣ್ಯದ ವ್ಯಾಪ್ತಿಯ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ತೀವ್ರ ಬಿಸಿಲಿದ್ದ ಪರಿಣಾಮ ಬೆಂಕಿ ಹರಡಿ ಇಡೀ ಬೆಟ್ಟವೇ ಸುಟ್ಟು ಹೋಗಿದ್ದು ನೂರಾರು ಎಕರೆ ಅರಣ್ಯ ಭಸ್ಮವಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬಿಡು ಬಿಟ್ಟಿದ್ದು ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಅವರು ಕಿಡಿಗೇಡಿಗಳಿಂದ ಬೆಟ್ಟಕ್ಕೆ ಬೆಂಕಿ ಬಿದ್ದಿರುವ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಸಿಬ್ಬಂದಿ ಕಳುಹಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗಿದೆ. ಬೆಂಕಿ ಆರಿದ ನಂತರ ಎಷ್ಟು ವಿಸ್ತೀರ್ಣದ ಅರಣ್ಯ ಸುಟ್ಟು ಹೋಗಿದೆ ಎಂಬುದು ಗೊತ್ತಾಗಲಿದೆ ಎಂದರು.