ಹನೂರು: ಪಟ್ಟಣದ ಅಧಿದೇವತೆ ಶ್ರೀಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ತಮಟೆ ಸಾರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಹನೂರು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೇವಿ ಶ್ರೀಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವು ಮಾ.16ರಿಂದ 19 ರವರೆಗೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ರಂಗದ ತೋಟಿಯ ಮೂಲಕ ಪಟ್ಟಣದಾದ್ಯಂತ ತಮಟೆ ಸಾರುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಮಧ್ಯಾಹ್ನ ದೇಗುಲದ ಆವರಣದಲ್ಲಿ ಜಮಾವಣೆಗೊಂಡ ಪಟ್ಟಣದ ವಿವಿಧ ಕೋಮಿನ ಮುಖಂಡರು ದೇವಿಗೆ ಹಾಗೂ ತಮಟೆಗೆ ಪೂಜೆ ನೆರವೇರಿಸಿದರು. ಬಳಿಕ ತಮಟೆಯನ್ನು ಪಟ್ಟಣ ವಾಸಿಗಳಿಂದ ನೇಮಿಸಲ್ಪಟ್ಟ ರಂಗದ ತೋಟಿಗೆ ಹಸ್ತಾಂತರಿಸಲಾಯಿತು. ರಂಗದ ತೋಟಿ ಪಟ್ಟಣದಾದ್ಯಂತ ಸಂಚರಿಸಿ ಮುಂದಿನ 15 ದಿನಗಳಲ್ಲಿ ದೇವಿಯ ಜಾತ್ರೆ ನಡೆಯಲಿದ್ದು ಪ್ರತಿಯೊಬ್ಬರೂ ಸಜ್ಜಾಗುವಂತೆ ಸಾರುವ ಮೂಲಕ ತಿಳಿಸಿದರು.
ವಿಶೇಷ ಪೂಜೆ: ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಬೆಳಗ್ಗೆ 5ರಲ್ಲಿ ದೇವಿಗೆ ಹಾಲು, ಮೊಸರು, ಜೇನುತುಪ್ಪ, ಎಳನೀರು, ಪನ್ನೀರು, ಗಂಧ ಸೇರಿದಂತೆ ವಿಶೇಷ ಅಭಿಷೇಕಗಳು ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು. ದೇವಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇಗುಲದ ವತಿಯಿಂದ ಅನ್ನದಾಸೋಹ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳು: ಜಾತ್ರಾ ಮಹೋತ್ಸವದ ಹಿನ್ನೆಲೆ ಮಾ.6ರಿಂದ ಪ್ರತಿದಿನ ಸಂಜೆ 7 ಗಂಟೆಗೆ ದೇವಾಲಯದ ಆವರಣದಲ್ಲಿ ರಂಗಕುಣಿತ, 10ರ ಮಂಗಳವಾರ ದೇವಿಯ ಪತಿಯ ಪ್ರತೀಕವಾದ ಕಂಬ ಪ್ರತಿಷ್ಠಾಪನೆ, 16ರಂದು ಜಾಗರ ಸಮರ್ಪಣೆ, 17ರಂದು ತಂಪುಜ್ಯೋತಿ, 18ರಂದು ದೊಡ್ಡ ಬಾಯಿಬೀಗ ಹಾಗೂ 19 ಪ್ರಾತಃಕಾಲ ಅಗ್ನಿಕುಂಡ ದರ್ಶನ ನಡೆಯಲಿದೆ.