ಮೃತರ ಕುಟುಂಬಗಳಿಗೆ ಸಾಂತ್ವನ

ಹನೂರು: ಕ್ಷೇತ್ರ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟ 11 ಜನರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ, ಸಂಸದ ಧ್ರುವನಾರಾಯಣ್ ಹಾಗೂ ಶಾಸಕ ಆರ್. ನರೇಂದ್ರ ತೆರಳಿ ಸಾಂತ್ವನ ಹೇಳಿದರು.

ಈ ವೇಳೆ ಶಾಸಕ ಆರ್. ನರೇಂದ್ರ ಮಾತನಾಡಿ, ಪ್ರಕರಣ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹೀನಕೃತ್ಯವಾಗಿದೆ. ಇದು ನೀಚರ ಹಾಗೂ ಕಟುಕರ ಕೆಲಸವಾಗಿದೆ. ಪ್ರಸಾದದಲ್ಲಿ ವಿಷ ಬೆರೆಸಿರುವವರು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರ ಬಳಿ ಚರ್ಚೆ ನಡೆಸಲಾಗಿದೆ. ಅವರೂ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಪ್ರಕರಣ ಕುರಿತು ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರ ಬಗ್ಗೆ ಆಗಾಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

13 ಉಸ್ತುವಾರಿಗಳ ನೇಮಕ
ಅಸ್ವಸ್ಥರಾಗಿದ್ದ ಬಹುತೇಕರನ್ನು ಮೈಸೂರಿನ 10ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಪ್ರತಿ ಆಸ್ಪತ್ರೆಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಈ ನೋಡಲ್ ಅಧಿಕಾರಿಗಳು ರೋಗಿಗಳ ಆಗುಹೋಗುಗಳನ್ನು ಗಮನಿಸುವುದು, ರೋಗಿಗಳಿಗೆ ಅವಶ್ಯಕವಾದ ಔಷಧೋಪಚಾರಗಳನ್ನು ಕೊಡಿಸುವುದು ಹಾಗೂ ರೋಗಿಗಳ ಸಂಬಂಧಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯ ಬಸವರಾಜು ತಾಪಂ ಸದಸ್ಯ ಅರುಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಂಪಯ್ಯ, ಈಶ್ವರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ಮುಖಂಡರಾದ ಕೊಪ್ಪಾಳಿ ಮಹದೇವನಾಯ್ಕ, ಮಂಗಲ ಪುಟ್ಟರಾಜು ಹಾಗೂ ಇನ್ನಿತರರು ಹಾಜರಿದ್ದರು.