ವಾಹನ ಉರುಳಿ ಬಿದ್ದು ಇಬ್ಬರಿಗೆ ಗಾಯ

ಹನೂರು: ಮಲೆಮಹದೇಶ್ವರಬೆಟ್ಟ ಹಾಗೂ ತಾಳಬೆಟ್ಟದ ಮಧ್ಯೆ ಇರುವ 5ನೇ ತಿರುವಿನಲ್ಲಿ ಶನಿವಾರ ಭತ್ತ ಕಟಾವು ಮಾಡುವ ವಾಹನ ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.

ತಮಿಳುನಾಡಿನ ಮಣಿವಣ್ಣನ್ ಹಾಗೂ ಸುರೇಶ್ ಗಾಯಗೊಂಡವರು. ಇವರು ಮತ್ತೀಪುರ ಗ್ರಾಮದಲ್ಲಿ ಭತ್ತದ ಕಟಾವಿಗೆ ತಮಿಳುನಾಡಿನಿಂದ ಕಟಾವು ವಾಹನದ ಸಮೇತ ಬರುತ್ತಿದ್ದರು. ಈ ವೇಳೆ ಮಹದೇಶ್ವರಬೆಟ್ಟದಿಂದ ತಾಳಬೆಟ್ಟದ ಮಾರ್ಗಮಧ್ಯೆ ಇರುವ 5ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಸುರೇಶ ಎಂಬುವರ ತಲೆಗೆ ತೀವ್ರ ಪೆಟ್ಟಾದರೆ, ಮಣಿವಣ್ಣನ್‌ಗೆ ತಲೆ ಹಾಗೂ ಸೊಂಟ ಭಾಗಕ್ಕೆ ಪೆಟ್ಟಾಗಿದೆ.

ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ 108 ಆಂಬುಲೆನ್ಸ್‌ಗೆ ಕರೆ ಮಾಡಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೆಟ್ಟೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.