ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರ ಒಕ್ಕೊರಲ ವಿರೋಧ

ಹನೂರು: ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೇರಿ ಇನ್ನಿತರ ಮೂಲಸೌಕರ್ಯವನ್ನು ಕಲ್ಪಿಸಲು ಬದ್ಧವಾಗಿರುವುದಾಗಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿ ಭರವಸೆ ನೀಡಿರುವುದರಿಂದ ಯಾವುದೇ ಕಾರಣಕ್ಕೂ ಗ್ರಾಮ ಬಿಟ್ಟು ಹೋಗುವುದಿಲ್ಲ ಎಂದು ಚಂಗಡಿ ಗ್ರಾಮಸ್ಥರು ಸ್ಪಷ್ಟಪಡಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಅವರಣದಲ್ಲಿ ಬುಧವಾರ ಚಂಗಡಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಸಭೆ ನಡೆಸಿ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಕೂಲಂಕಶವಾಗಿ ಚರ್ಚಿಸಿ ತೀರ್ಮಾನ ಕೈಗೊಂಡರು.

ಒಕ್ಕೊರಲ ನಿರ್ಧಾರ: ನ.16ರಂದು ಗ್ರಾಮಕ್ಕೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಅವರ ನಿರ್ಧಾರದಂತೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೇ ಹೊರತು ಗ್ರಾಮವನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಬಾರದು. ಗ್ರಾಮ ಸ್ಥಳಾಂತರಕ್ಕೆ ನಮ್ಮೆಲ್ಲರ ವಿರೋಧವಿದೆ ಎಂದು ಒಕ್ಕೊರಲಿನಿಂದ ತೀರ್ಮಾನ ಕೈಗೊಂಡರು.

ಸಭೆಯಲ್ಲಿ ಗ್ರಾಮಸ್ಥ, ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಬಸವೇಗೌಡ ಮಾತನಾಡಿ, ಅರಣ್ಯದೊಳಗಿರುವ ಚಂಗಡಿ ಗ್ರಾಮಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು ಕ್ಷೇತ್ರದ ಶಾಸಕ ನರೇಂದ್ರ 8 ವರ್ಷದ ಹಿಂದೆ ಬಿಡುಗಡೆ ಮಾಡಿಸಿದ್ದ ಅನುದಾನ ಅರಣ್ಯ ಇಲಾಖೆಯ ಕಾನೂನಿನ ತೊಡಕಿನಿಂದ ಹಿಂದೆ ಹೋಗಿತ್ತು. ಇದೀಗ 13 ಕಿಮೀ ರಸ್ತೆಯನ್ನು ಮೆಟ್ಲಿಂಗ್ ರಸ್ತೆಯನ್ನಾಗಿಸಲು 2.30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯೂ ಅನುಮತಿ ನೀಡಿದೆ. ಈ ರಸ್ತೆಯಾದರೆ ನಾವು ಯಾವುದೇ ಕಾರಣಕ್ಕೂ ಗ್ರಾಮ ಬಿಟ್ಟು ತೆರಳುವುದಿಲ್ಲ ಎಂದರು.

ಮುಖಂಡ ಮುನಿಗೌಡ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಮೂಲ ಸೌಕರ‌್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಆದರೆ ಗ್ರಾಮಸ್ಥರಿಗೆ ನೀಡಲು ಉದ್ದೇಶಿಸಿರುವ ಕೊತ್ತನೂರು ಸಮೀಪದ ಜಾಗ ಕೃಷಿಗೆ ಯೋಗ್ಯವಾಗಿಲ್ಲ. ಕುಡಿಯುವ ನೀರು ಬರುವುದಿಲ್ಲ. ಆದ್ದರಿಂದ ಗ್ರಾಮವನ್ನು ಸ್ಥಳಾಂತರಿಸುವ ನಿರ್ಧಾರ ಕೈಬಿಡಬೇಕು ಎಂದು ಹೇಳಿದರು.

ಸಭೆಯಲ್ಲಿ ಗ್ರಾಮಸ್ಥರಾದ ಗ್ರಾಪಂ ಮಾಜಿ ಸದಸ್ಯ ಮಹೇಶ್, ಮುನಿಮಾರ, ಕರಿಯಪ್ಪ, ಕೆಂಪಮ್ಮ, ಅರುಣ್, ಮಾರಮ್ಮ ಹಾಗೂ ಇನ್ನಿತರರು ಹಾಜರಿದ್ದರು.

ಮೂಲಸೌಕರ್ಯ: ಚಂಗಡಿ ಗ್ರಾಮಕ್ಕೆ 13 ಕಿಮೀ ಸಂಪರ್ಕ ರಸ್ತೆ ನಿರ್ಮಿಸಲು 2009ರಲ್ಲಿ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಸಹ ನೀಡಲಾಗಿತ್ತು. ಆದರೆ ಈ ವೇಳೆ ಅರಣ್ಯ ಇಲಾಖೆಯು ಅನುಮತಿ ನೀಡಲಿಲ್ಲ. ಈ ಬಾರಿ ಚುನಾವಣೆ ವೇಳೆ ಗ್ರಾಮಸ್ಥರು ಕಚ್ಚಾ ರಸ್ತೆಯನ್ನಾದರೂ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಈ ದಿಸೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 2 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಗ್ರಾಮಕ್ಕೆ ಹಂತ ಹಂತವಾಗಿ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಆರ್.ನರೇಂದ್ರ ಭರವಸೆ ನೀಡಿದರು.