ದೇವಾಲಯ ವಧಾಲಯ ಆಗದಿರಲಿ, ಪ್ರಾಣಿದಯಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅಭಿಮತ

ಹನುಮಸಾಗರ: ದೇವಾಲಯಗಳು ವಧಾಲಯಗಳಾಗದೇ ದಿವ್ಯಾಲಯಗಳಾಗಬೇಕು ಎಂದು ವಿಶ್ವ ಪ್ರಾಣಿ ದಯಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು. ಸಮೀಪದ ಕುಂಬಳಾವತಿ ಗ್ರಾಮದೇವತೆ ದ್ಯಾಮಾಂಬಿಕಾದೇವಿ ಜಾತ್ರೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಪ್ರಾಣಿ ಬಲಿ ನಿಷೇಧ ಕುರಿತ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ದೇವರ ಹೆಸರಿನಲ್ಲಿ ಹರಕೆ ತೀರಿಸುವ ನೆಪದಲ್ಲಿ ದೇವಾಲಯದ ಆವರಣ, ಸುತ್ತಲಿನ ಪ್ರದೇಶಗಳಲ್ಲಿ ಕೋಣ, ಕುರಿ, ಕೋಳಿ ಸೇರಿ ನಾನಾ ಪ್ರಾಣಿಗಳನ್ನು ಬಲಿ ನೀಡಲಾಗುತ್ತಿದೆ. ಇದು ಕಾನೂನು ರೀತ್ಯಾ ಅಪರಾಧ. ಇದರ ಬದಲು ಅರಿಷಿಣ, ಕುಂಕುಮ, ಧೂಪ, ದೀಪ ಸಮರ್ಪಿಸಿ, ಹಣ್ಣು, ತೆಂಗಿನಕಾಯಿ, ಸಿಹಿಖಾದ್ಯ ದೇವರಿಗೆ ಸಮರ್ಪಿಸಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದರು.

ಕುಂಬಳಾವತಿ ಗ್ರಾಮದ ದೇವಸ್ಥಾನದ ಕಮಿಟಿಯವರು ವಿಶ್ವ ಪ್ರಾಣಿ ದಯಾ ಸಂಘ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ದೇವತೆಗೆ ಬಲಿ ಕೊಡಲೆಂದೇ ಬಿಟ್ಟಿದ್ದ ಕೋಣವನ್ನು ಸ್ವಾಮೀಜಿಗೆ ಹಸ್ತಾಂತರಿಸಿದರು. ಈ ಸಂದರ್ಭ ವಿಶ್ವ ಪ್ರಾಣಿ ದಯಾ ಸಂಘದ ಮಹಿಳಾ ಸಂಚಾಲಕಿ ಸುನಂದಾ, ಪಿಎಸ್‌ಐ ಎಚ್.ನಾಗರಾಜ ಗ್ರಾಮಸ್ಥರಾದ ನಾರಾಯಣರಾವ್ ಕುಲಕರ್ಣಿ, ಸುಬ್ಬರಾವ್ ಕುಲಕರ್ಣಿ, ಹುಲ್ಲಪ್ಪ ವಡಿಗೇರಿ, ಪ್ರಕಾಶ ಸಿಂಗ್ ರಜಪೂತ, ಶಿವಪ್ಪ ಕುಂಟೋಜಿ, ದ್ಯಾಮಪ್ಪ ಪೂಜಾರ, ಹುಚ್ಚಪ್ಪ ಕಾಟಾಪೂರ, ರಾಮಪ್ಪ ವಾಲೀಕಾರ, ಶರಣಪ್ಪ ಗುಡಿ, ಮುತ್ತಪ್ಪ ಕುಂಟೋಜಿ, ಮಾಸಪ್ಪ ವಾಲೀಕಾರ, ಕಳಕಪ್ಪ ಜಕ್ಕಿಲಿ, ಸೋಮಪ್ಪ ಇತರರು ಇದ್ದರು.