ಹನುಮಸಾಗರ: ಎಲ್ಲರೂ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿ ಅಜಯಕುಮಾರ ದೇವೂರ ಹೇಳಿದರು.
ಸಮೀಪದ ಕಾಟಾಪುರ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಜಾಗೃತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಗುಟ್ಖಾ ಸೇವಿಸುವುದರಿಂದ ಬಾಯಿ ಕ್ಯಾನ್ಸರ್ ಬರುತ್ತದೆ. ವಾಸಿಯಾಗದೇ ಇರುವ ಗಾಯ, ಬಹಳ ದಿನಗಳ ಕೆಮ್ಮು, ಊಟ ಮಾಡುವಾಗ ಗಂಟಲು ನೋವು ಇದು ಕ್ಯಾನ್ಸರ್ ಲಕ್ಷಣಗಳಾಗಿವೆ. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕೋರಳಿನಂತಹ ಕ್ಯಾನ್ಸರ್ ತಗಲುವ ಸಾಧ್ಯತೆ ಇರುತ್ತದೆ. ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ಪ್ರಾಥಮಿಕ ಹಂತದಲ್ಲಿ ರೋಗವನ್ನು ಗುಣಪಡಿಸಬಹುದು ಎಂದರು.
ಮುಖ್ಯ ಶಿಕ್ಷಕ ಶಿವಪ್ಪ ಚೊಳಚಗುಡ್ಡ, ಆರೋಗ್ಯ ಇಲಾಖೆ ಸಿಬ್ಬಂದಿ ಸುಧಾ, ರಾಧಾ ರಾಠೋಡ, ವಿಜಯಲಕ್ಷ್ಮೀ ಇತರರಿದ್ದರು.