ಹನುಮಂತ ದಲಿತನಷ್ಟೇ ಅಲ್ಲ, ಮುನುವಾದಿಗಳ ಜೀತದಾಳಾಗಿದ್ದ: ಉತ್ತರಪ್ರದೇಶ ಸಂಸದೆ

ಲಖನೌ: ಹಿಂದು ದೇವರಾದ ಹನುಮಂತನನ್ನು ದಲಿತ ಎಂದು ಉಲ್ಲೇಖಿಸಿ ವಿವಾದ ಸೃಷ್ಟಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆನ್ನಲ್ಲೇ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ ‘ಹನುಮಂತ ದಲಿತ ಮತ್ತು ಮನುವಾದಿಗಳ ಜೀತದಾಳಾಗಿದ್ದ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ದೇವರಾದ ಹನುಮಂತ ದಲಿತನಾಗಿದ್ದ. ಹಾಗೆಯೇ ಮನುವಾದಿಗಳ ಜೀತದಾಳಾಗಿದ್ದ. ಅವನು ದಲಿತ ಮಾನವ. ರಾಮನಿಗಾಗಿ ಅಷ್ಟೆಲ್ಲಾ ಮಾಡಿದರೂ ಆತನಿಗೇಕೆ ಬಾಲ ಕೊಟ್ಟಿದ್ದರು? ಮುಖವನ್ನೇಕೆ ಕಪ್ಪಗಾಗಿಸಿದ್ದರು? ಆತನನ್ನು ಮಂಗನನ್ನೇಕೆ ಮಾಡಿದರು?” ಎಂದು ಬಹ್ರೈಚ್​ನ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ ಹೇಳಿದ್ದಾರೆ.

ಅಷ್ಟೊಂದು ಭಕ್ತಿಯಿಂದ ರಾಮನಿಗಾಗಿ ಅಷ್ಟೆಲ್ಲಾ ಸಾಹಸ ಮಾಡಿದ್ದ ಹನುಮಂತನನ್ನು ಮಾನವನನ್ನಾಗಿ ಉಳಿಸದೆ, ಮಂಗನನ್ನಾಗಿ ಬಿಂಬಿಸಿದರು. ರಾಮನ ಕಾಲದಲ್ಲಿಯೂ ದಲಿತರು ಅವಮಾನ ಎದುರಿಸಬೇಕಿತ್ತು. ದಲಿತರಾದ ನಮ್ಮನ್ನು ಏಕೆ ಮಾನವರೆಂದು ಪರಿಗಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ರಾಜಸ್ಥಾನ ಅಲ್ವಾರ್​ ಜಿಲ್ಲೆಯ ಮಾಳಖೇಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​, ಹನುಮಂತ ಒಬ್ಬ ಅರಣ್ಯ ನಿವಾಸಿಯಾಗಿದ್ದು, ಎಲ್ಲಾ ಭಾರತೀಯ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ ಎಂದು ಹೇಳಿದ್ದರು.

ಫುಲೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಚಂದ್ರ ಮೋಹನ್​, “ಅವರಿಗೆ ಭಾರತದ ಸಂಸ್ಕೃತಿ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲವೆಂದೆನಿಸುತ್ತದೆ” ಎಂದರು. (ಏಜೆನ್ಸೀಸ್)

ಹನುಮಂತನ ದೇಗುಲಗಳ ನಿರ್ವಹಣೆ ಜವಾಬ್ದಾರಿ ನೀಡಿ ಎಂದು ದಲಿತರ ಮನವಿ

ಹನುಮಂತನನ್ನು ದಲಿತ ಎಂದ ಯುಪಿ ಸಿಎಂ ಯೋಗಿಗೆ ಲೀಗಲ್​ ನೋಟಿಸ್​