ಪಿರಿಯಾಪಟ್ಟಣ: ತಾಲೂಕಿನ ಮುತ್ತೂರು ರಾಜೀವ ಗ್ರಾಮದಲ್ಲಿ ಶುಕ್ರವಾರ ಹನುಮ ಜಯಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ 5.30 ಗಂಟೆಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಮಂಗಳವಾದ್ಯದೊಂದಿಗೆ ಕಾರ್ಯ ಸ್ಥಾನದಿಂದ 108 ಕಲಶ ಸ್ಥಾಪನೆ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 8 ಗಂಟೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಗಣಪತಿ ಹೋಮ, ಪವಮಾನ ಹೋಮ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದ ಬಳಿಕ 11 ಗಂಟೆಗೆ ಶುಭ ಕುಂಭ ಲಗ್ನದಲ್ಲಿ ಶ್ರೀ ವೀರಾಂಜನೇಯ ಮೂರ್ತಿಗೆ ಕಳಸಾಭಿಷೇಕ ಪೂಜೆ ನಡೆಸಲಾಯಿತು.
ಮಧ್ಯಾಹ್ನ 12.45 ಗಂಟೆಯಿಂದ ಅನ್ನಸಂತರ್ಪಣೆ ಆರಂಭಿಸಿ ಸಂಜೆ 4 ಗಂಟೆ ವರೆಗೂ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಂತರ ದೇವಾಲಯದ ಉತ್ಸವ ಮೂರ್ತಿಯನ್ನು ಚಂಡೆ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ಮಂತ್ರ ಪಠಣ, ವೇದ, ಘೋಷದೊಂದಿಗೆ ಬಲಿ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಶ್ರೀ ಮಹಾಗಣಪತಿ ಶ್ರೀ ವೀರಾಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 10ನೇ ವರ್ಷದ ಹನುಮ ಜಯಂತ್ಯುತ್ಸವಕ್ಕೆ ಇಡೀ ಗ್ರಾಮದಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ವೀರಾಂಜನೇಯ ಮೂರ್ತಿಗೆ ಹನುಮ ಧ್ವಜಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಪಕ್ಕದಲ್ಲಿರುವ ವಿಶಾಲವಾದ ಜಾಗದಲ್ಲಿ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಹನುಮ ಜಯಂತಿ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ವಿಶೇಷ ಪೆಂಡಾಲ್ ನಿರ್ಮಿಸಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪಿರಿಯಾಪಟ್ಟಣ ಸೇರಿದಂತೆ, ಸುತ್ತಮುತ್ತಲಿನ ಗ್ರಾಮಗಳಾದ ಮುತ್ತೂರು, ಲಿಂಗಾಪುರ, ಕಾಳೆತಿಮ್ಮನಹಳ್ಳಿ, ಬೇಗೂರು, ನಾರಳಾಪುರ, ಮಾಗಳಿ, ಸುಳುಗೋಡು ಮತ್ತಿತರ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ನಿತಿನ್ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷೆ ಕೆ.ಆರ್.ನಿರೂಪಾ, ಶ್ರೀ ಮಹಾಗಣಪತಿ ಶ್ರೀ ವೀರಾಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಶಿವರಾಜ್ ಇತರರು ಇದ್ದರು.