ಬೇಲೂರು: ಈ ಬಾರಿಯ ಹನುಮ ಜಯಂತಿಯನ್ನು ಡಿ.21ರಂದು ಹಬ್ಬದ ರೀತಿಯಲ್ಲಿ ಆಚರಿಸಲು ಗುರುವಾರ ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ವೀರಾಂಜನೇಯ ಟ್ರಸ್ಟ್ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಚಿಕ್ಕದಾಗಿ ಪ್ರಾರಂಭವಾದ ಹನುಮ ಜಯಂತಿ ಉತ್ಸವವು ಇಂದು ತಾಲೂಕಿನ ಹನುಮ ಜಯಂತಿ ಎಂದೇ ಹೆಸರು ಪಡೆದಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ. ಈ ಬಾರಿ 12ನೇ ವರ್ಷಕ್ಕೆ ಕಾಲಿಟ್ಟಿದ್ದು ಅದ್ದೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ ಉತ್ಸವ ಸಮಿತಿ ರಚಿಸಿ ಯುವಕರಿಗೆ ಆದ್ಯತೆ ನೀಡಲಾಗಿದೆ. ಉತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.
ವಿಶ್ವ ಹಿಂದು ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಕಲೇಶಪುರ ರಘು ಮಾತನಾಡಿ, ಹನುಮ ಜಯಂತಿ ಎಂದರೆ ಹಿಂದುಗಳ ಪವಿತ್ರ ಹಬ್ಬ. ಇದು ಕೇವಲ ನಿಂತ ನೀರಾಗಬಾರದು. ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. 12ನೇ ವರ್ಷದ ಜಯಂತಿಯನ್ನು ಕೇವಲ ಪಟ್ಟಣದಲ್ಲಿ ಮಾಡಿದರೆ ಸಾಲದು ಜಯಂತಿಯನ್ನು ಹಬ್ಬದ ರೀತಿ ಆಚರಿಸಬೇಕು. ತಾಲೂಕಿನ ಪ್ರತಿಯೊಬ್ಬ ಹಿಂದು ಭಾಗವಹಿಸಬೇಕು. ಇದು ಒಂದು ಜಾತಿ, ಧರ್ಮದ ಹಬ್ಬವಲ್ಲ. ತಾಲೂಕಿನ 2 ಲಕ್ಷಕ್ಕೂ ಹೆಚ್ಚು ಜನರು ಕೈಜೋಡಿಸಬೇಕು. ಉತ್ಸವ ಸಾಗುವ ಸಂದರ್ಭ ಎಲ್ಲ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಕೈ ಜೋಡಿಸುವಂತೆ ಮನವಿ ಮಾಡಿದರು.
ಉತ್ಸವ ಸಮಿತಿಯ ಸದಸ್ಯ ನಾಗೇನಹಳ್ಳಿ ಸಂತೋಷ್ ಮಾತನಾಡಿ, ಹನುಮ ಜಯಂತಿಯಲ್ಲಿ ಎಲ್ಲಿಯೂ ಲೋಪವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಉತ್ಸವದಲ್ಲಿ ಭಾಗವಹಿಸಲು ಕರಪತ್ರ ಹಂಚಿ ಹಸಿರು ತೋರಣ ಹಾಗೂ ಕೇಸರಿ ಧ್ವಜಗಳಿಂದ ಪಟ್ಟಣ ಸೇರಿದಂತೆ ಗ್ರಾಮಗಳನ್ನು ಸಿಂಗರಿಸಲು ತೀರ್ಮಾನಿಸಲಾಗಿದೆ. ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಪ್ರಗತಿಪರ ಸಂಘಟನೆಗಳ ಸಹಕಾರವನ್ನು ಪಡೆದು ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ವೀರಾಂಜನೇಯ ಟ್ರಸ್ಟ್ ಸದಸ್ಯರಾದ ನಿರ್ವಾಣಶೆಟ್ಟಿ, ಮಂಜೇಗೌಡ, ಬಾಬಣ್ಣ, ಕರವೇ ಅಧ್ಯಕ್ಷ ಚಂದ್ರಶೇಖರ್, ರಂಗನಾಥ್, ಮಂಜುನಾಥ್, ಅನಂತ ರಾಜ್ ಅರಸ್, ಕರವೇ ತಾರನಾಥ್, ಉತ್ಸವ ಸಮಿತಿ ಸಂಚಾಲಕ ಸಂತೋಷ್ ಇದ್ದರು.