ಕಾಡಾನೆ ದಾಳಿಗೆ ಬೆಳೆ ನಾಶ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಗುರುವಾರ ರಾತ್ರಿ ಹೊರಬಂದ ಕಾಡಾನೆಯೊಂದು ಕಾಡಂಚಿನ ಬಿಲ್ಲೇನಹೊಸಹಳ್ಳಿ ಹಾಗೂ ಕೆ.ಜಿ.ಹೆಬ್ಬನಕುಪ್ಪೆ ಗ್ರಾಮದಲ್ಲಿ ದಾಂಧಲೆ ನಡೆಸಿ ರೈತರ ಬೆಳೆಯನ್ನು ನಾಶಪಡಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿ ಗ್ರಾಮದ ಸಹದೇವ, ಮಧು, ಕೆ,ಜಿ.ಹೆಬ್ಬನಕುಪ್ಪೆ ಗ್ರಾಮದ ಎಂ.ಕೆ.ಸುಬ್ಬಯ್ಯ, ಚಂದ್ರಶೇಖರ್ ಅವರ ಗದ್ದೆಗಳಿಗೆ ನುಗ್ಗಿದ ಕಾಡಾನೆ, ಭತ್ತದ ಬೆಳೆಯನ್ನು ತುಳಿದು ನಾಶಪಡಿಸಿದೆ.

ಇದಲ್ಲದೆ ರಾಜಗೋಪಾಲ್ ಅವರಿಗೆ ಸೇರಿದ ಬಾಳೆತೋಟ, ಜಿ.ಎಂ.ದೇವಯ್ಯ ಅವರ ಜಮೀನಿನಲ್ಲಿದ್ದ ಮೂರು ತೆಂಗಿನ ಗಿಡಗಳು ಹಾಗೂ ಸತ್ಯನಾರಾಯಣ ಅವರಿಗೆ ಸೇರಿದ ಮುಸುಕಿನ ಜೋಳ ಬೆಳೆಯನ್ನು ತುಳಿದು ಹಾಕಿ ಮತ್ತೆ ಕಾಡು ಸೇರಿವೆ. ಸ್ಥಳಕ್ಕೆ ಕಚುವಿನಹಳ್ಳಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈತರ ಆಗ್ರಹ: ಈ ಭಾಗದ ಗ್ರಾಮಗಳಿಗೆ ಅಗಿಂದ್ದಾಗೆ ಕಾಡಾನೆಗಳು ಲಗ್ಗೆ ಇಟ್ಟು ರೈತರು ಬೆಳೆದ ಬೆಳೆಗಳನ್ನು ತುಳಿದು ನಾಶ ಪಡಿಸುತ್ತಿವೆ. ಅರಣ್ಯ ಇಲಾಖೆ ಆನೆ ಹಾವಳಿ ನಿಯಂತ್ರಿಸಲು ಇನ್ನು ಹೆಚ್ಚಿನ ರಾತ್ರಿ ಕಾವಲು ಪಡೆ ನಿಯೋಜಿಸಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.