ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗುರುಪುರ ಭಾಗದಲ್ಲಿ ಕಾಡಾನೆಗಳ ದಾಳಿಗೆ ಭತ್ತ ಹಾಗೂ ರಾಗಿ ಬೆಳೆ ನಷ್ಟವಾ0203ಗಿದೆ.

ಗುರುಪುರ ಸಮೀಪದ ಗೌಡನಕಟ್ಟೆಯ ಶ್ರೀನಿವಾಸಶೆಟ್ಟಿ, ಬೀರೇಗೌಡರಿಗೆ ಸೇರಿದ ಭತ್ತದ ಗದ್ದೆಗೆ ಇಳಿದಿರುವ ಆನೆಗಳು ಭತ್ತದ ಫಸಲನ್ನು ತಿಂದು ತುಳಿದು ನಾಶಪಡಿಸಿವೆ. ಕಾಡಿಗೆ ವಾಪಾಸ್ ಹೋಗುವಾಗ ಗ್ರಾಮದ ನಾಗನಾಯ್ಕರಿಗೆ ಸೇರಿದ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ತಿಂದು ಹಾಕಿವೆ. ಇದರಿಂದ ಎರಡು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ವೀರನಹೊಸಹಳ್ಳಿ ವಲಯದಲ್ಲಿ ಬೇಲಿ ನಿರ್ಮಿಸಿದ್ದರಿಂದ ಗುರುಪುರ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು, ಆದರೆ, ಪ್ರತಿವರ್ಷದ ಕೊಯ್ಲು ಸಂದರ್ಭದಲ್ಲಿ ಭತ್ತ ಹಾಗೂ ರಾಗಿ ಬೆಳೆ ರುಚಿ ಕಂಡಿರುವ ಕಾಡಾನೆಗಳು ಹೇಗಾದರೂ ಸರಿ ಹೊರಬಂದು ಬೆಳೆಗಳನ್ನು ತಿಂದು ದಾಂಧಲೆ ನಡೆಸುತ್ತಿವೆ.

ಅರಣ್ಯ ಇಲಾಖೆ ಹೆಚ್ಚಿನ ಕಾವಲುಗಾರರನ್ನು ನೇಮಿಸಿ, ಕಾಡಾನೆಗಳ ಹಾವಳಿ ನಿಯಂತ್ರಿಸಬೇಕೆಂದು ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.03