ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಡೆತ್‌ನೋಟ್ ಬರೆದಿಟ್ಟು ಕೃತ್ಯ ಪರವೂರಿನಲ್ಲಿ ಓದಲು ಇಷ್ಟವಿಲ್ಲ ಎಂದಿದ್ದ ವಿದ್ಯಾರ್ಥಿ

ಕೊಕಟನೂರ: ಅಥಣಿ ತಾಲೂಕಿನ ಚಮಕೇರಿ ಗ್ರಾಮದ ಶ್ರೀ ಸದಾಶಿವ ಮಠದ ಶಿವಲಿಂಗೇಶ್ವರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ಕೆಂಗಲಗುತ್ತಿ ಗ್ರಾಮದ ಸದಾಶಿವ ಜಯವಂತ ಮಮದಾಪುರ (16) ಮೃತ ಬಾಲಕ.

ಶಾಲೆಯಿಂದ ಗುರುವಾರ ಮಧ್ಯಾಹ್ನ ಹೋದ ವಿದ್ಯಾರ್ಥಿ ಮರಳಿ ಶಾಲೆಗೆ ಬಂದಿರಲಿಲ್ಲ ಎಂದು ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಪಾಲಕರಿಗೆ ತಿಳಿಸಿದ್ದಾರೆ. ಗುರುವಾರದಿಂದ ಶನಿವಾರದವರೆಗೆ ಹುಡುಕಾಡಿದರೂ ಬಾಲಕ ಸಿಕ್ಕಿಲ್ಲ. ಶನಿವಾರ ಸಂಜೆ ಅದೇ ಶಾಲೆಯ ವಿದ್ಯಾರ್ಥಿಯೋರ್ವ ಸದಾಶಿವ ಮಠದ ಹೊರವಲಯದಲ್ಲಿ ಬಹಿರ್ದೆಸೆಗೆ ಹೋದಾಗ ಹುಣಸೆ ಮರಕ್ಕೆ ಸದಾಶಿವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಶಾಲೆಯ ವಸತಿ ನಿಲಯ ಮೇಲ್ವಿಚಾರಕರಿಗೆ ಈ ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ದೊರಕಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವ ಪರಿಶೀಲನೆ ನಡೆಸಿದಾಗ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವ ಡೆತ್‌ನೋಟ್ ದೊರೆತಿದೆ.

ಘಟನೆಯ ಹಿನ್ನೆಲೆ: ಬಾಲಕ ಸದಾಶಿವ ರಜೆ ನಿಮಿತ್ತ ಸ್ವಗ್ರಾಮಕ್ಕೆ ತೆರಳಿದಾಗ, ಚಮಕೇರಿ ಗ್ರಾಮದ ಸದಾಶಿವ ಮಠದ ವಸತಿ ನಿಲಯದಲ್ಲಿ ವಾಸವಿದ್ದು, ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದು ತನಗಿಷ್ಟವಿಲ್ಲ ಎಂದು ತಿಳಿಸಿದ್ದ. ಆದರೆ ಬಾಲಕನ ಪಾಲಕರು ಬಡವರಾದ್ದರಿಂದ ಉಚಿತ ವಸತಿ ಹಾಗೂ ಶುಲ್ಕ ರಹಿತ ವ್ಯವಸ್ಥೆ ಇದ್ದುದರಿಂದ ಶಾಲೆ ಪ್ರಾರಂಭವಾದ ಬಳಿಕ ಆತನಿಗೆ ತಿಳಿಹೇಳಿ ಚಮಕೇರಿಯಲ್ಲಿ ಕರೆತಂದು ಬಿಟ್ಟಿದ್ದರು. ಆದರೆ ಗುರುವಾರ ಶಾಲೆಯಿಂದ ಮಧ್ಯಾಹ್ನ ಊಟಕ್ಕೆ ಹೋದ ಸದಾಶಿವ ಶನಿವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾನೆ.

ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪಿಎಸ್‌ಐ ಎಚ್.ಡಿ.ಮುಲ್ಲಾ, ತನಿಖಾ ಸಹಾಯಕ ಅಶೋಕ ಹುಲಸದಾರ, ಎಂ.ಎಸ್.ಮೇತ್ರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *