ಕೊಕಟನೂರ: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಕೊಕಟನೂರ: ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮದ ಹೊರವಲಯದ ಧಡಕೆ ತೋಟದ ವಸತಿ ಬಳಿ ಇರುವ ಬನ್ನಿ ಗಿಡದಲ್ಲಿ ಭಾನುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತನನ್ನು ಕೊಕಟನೂರ ಗುಂಡದಖೋಡಿ ತೋಟದ ವಸತಿ ನಿವಾಸಿ ಬಸವರಾಜ ಅಣ್ಣಪ್ಪ ಉಳ್ಳಾಗಡ್ಡಿ (30) ಎಂದು ಗುರುತಿಸಲಾಗಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ, ಈತನ ಪತ್ನಿ ಅನ್ನಪೂರ್ಣ ಅವರು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತೋಟದ ವಸತಿ ಮನೆಯಿಂದ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಕೊಕಟನೂರ ಗ್ರಾಮಕ್ಕೆ ಹೋಗಿ ಬರುವುದಾಗಿ ದ್ವಿಚಕ್ರ ವಾಹನದ ಮೇಲೆ ತೆರಳಿದ್ದರು.

ಮನೆಗೆ ಮರಳಿ ಬರಲು ತಡ ಮಾಡಿದ್ದರಿಂದಾಗಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಮಾವನವರೂ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ರಾತ್ರಿ 2 ಗಂಟೆ ನಂತರ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬಸವರಾಜ ಧಡಕೆ ತೋಟದ ವಸತಿ ಪ್ರದೇಶದಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ತನ್ನ ಪತಿಗೆ ಶತ್ರುಗಳು ಯಾರೂ ಇಲ್ಲ, ಮನೆಯವರ ಜತೆ ಜಗಳವೂ ಆಗಿರಲಿಲ್ಲ. ಆದರೆ ಸಾವಿಗೆ ಕಾರಣ ಮಾತ್ರ ತಿಳಿದು ಬಂದಿಲ್ಲ ಎಂದು ದೂರಿನಲ್ಲಿ ಆತನ ಕುಟುಂಬದವರು ತಿಳಿಸಿದ್ದಾರೆ.

ಬಸವರಾಜನಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಕೊಕಟನೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಗಳಿ ಪೊಲೀಸ್ ಠಾಣೆಯ ಪಿಎಸ್‌ಐ ರಾಕೇಶ ಬಗಲಿ, ತನಿಖಾ ಸಹಾಯಕ ಎಸ್.ಎಂ. ಮೇತ್ರಿ, ಆರ್.ಎ.ಕಮತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.