ಅಂಗವಿಕಲರ ಆಶಾಕಿರಣ ಇಕ್ವಿಪ್ ಇಂಡಿಯಾ

ಇಲ್ಲಿ ಕಣ್ಣಿಲ್ಲದವರೂ ನೋಡಬಲ್ಲರು, ಕಾಲಿಲ್ಲದವರೂ ನಡೆಯಬಲ್ಲರು…

| ಕರಿಯಪ್ಪ ಅರಳಿಕಟ್ಟಿ ಹುಬ್ಬಳ್ಳಿ

ಅದು ತಮ್ಮ ಬದುಕಲ್ಲಿ ಕತ್ತಲು ತುಂಬಿದೆ ಎಂದುಕೊಳ್ಳುವ ಬಡ ಅಂಗವಿಕಲರ ಬಾಳಿಗೆ ಬೆಳಕು ನೀಡುವ ವಿದ್ಯಾ ದೇಗುಲ. ಅಲ್ಲಿಗೆ ಬಂದವರು ಕಣ್ಣಿಲ್ಲದಿದ್ದರೂ ಪ್ರಪಂಚ ಕಾಣುತ್ತಾರೆ. ಕಾಲು ಇಲ್ಲದವರು ನಡೆದಾಡುತ್ತಾರೆ. ಅರ್ಧಕ್ಕೆ ಬಿಟ್ಟ ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಾರೆ. ತೆವಳುತ್ತ ಬಂದವರು ನಡೆಯುತ್ತ ಹೊರ ಹೋಗುತ್ತಾರೆ. ಇದಕ್ಕೂ ಮಿಗಿಲಾಗಿ ಸ್ನೇಹ, ಪ್ರೀತಿ, ವಿಶ್ವಾಸದ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಾರೆ..!

ಹೀಗೆ ಅಂಗವಿಕಲರ ಬಾಳಿಗೆ ಆಶಾಕಿರಣವಾಗಿರುವುದು ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮ ಬಳಿಯಿರುವ ಸೇಂಟ್ ಫ್ರಾನ್ಸಿಸ್ ಟ್ರಸ್ಟ್ ನೇತೃತ್ವದ ಇಕ್ವಿಪ್ ಇಂಡಿಯಾ ಪುನರ್ವಸತಿ ಕೇಂದ್ರ. 1997ರಲ್ಲಿ ಆರಂಭವಾಗಿರುವ ಸಂಸ್ಥೆಯು, ತಾನೊಬ್ಬ ಅಂಗವಿಕಲ, ಬೇರೊಬ್ಬರ ಆಶ್ರಯದಲ್ಲಿಯೇ ಬದುಕಬೇಕು ಎಂದುಕೊಂಡು ಮನೆಯ ಮೂಲೆ ಸೇರಿರುವವರನ್ನು ಗುರುತಿಸಿ ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಾದ ದೈಹಿಕ, ಮಾನಸಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಹಾಯ ಮಾಡುತ್ತಿದೆ. ಕರಕುಶಲ ವಸ್ತುಗಳ ತಯಾರಿಕೆ ಕುರಿತು ತರಬೇತಿ ನೀಡುವ ಮೂಲಕ ಸ್ವಂತ ದುಡಿಮೆ ಮಾಡಲು ಸ್ಪೂರ್ತಿ ತುಂಬುತ್ತಿದೆ.

ದೈಹಿಕ ಚಿಕಿತ್ಸೆಯಿಂದ ಆರಂಭ…

ಉತ್ತರ ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಆಯಾ ಜಿಲ್ಲೆ ವ್ಯಾಪ್ತಿಯ ಗ್ರಾಮಗಳಲ್ಲಿರುವ ಅಂಗವಿಕಲರನ್ನು ಗುರುತಿಸಿ ತಮ್ಮ ಕೇಂದ್ರಕ್ಕೆ ಕರೆತರುವ ಸಿಬ್ಬಂದಿ, ಮೊದಲಿಗೆ ಅವರ ದೈಹಿಕ ಸಮಸ್ಯೆ ನಿವಾರಿಸುತ್ತಾರೆ. ದೈಹಿಕವಾಗಿ ಚಿಕಿತ್ಸೆ ನೀಡುವಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಬೇರೆ ಆಸ್ಪತ್ರೆಯಲ್ಲಿ ಮಾಡಿಸಿ, ತಮ್ಮ ಕೇಂದ್ರದಲ್ಲಿ ಇತರ ಚಿಕಿತ್ಸೆ ಮುಂದುವರಿಸುತ್ತಾರೆ.

ಬದುಕು ಕಟ್ಟಿಕೊಳ್ಳಲು ತರಬೇತಿ…

ಚಿಕಿತ್ಸೆಯಿಂದ ಸುಧಾರಿಸಿಕೊಂಡವರಿಗೆ ಅವರ ಅಭಿರುಚಿಯಂತೆ ಕಂಪ್ಯೂಟರ್ ಶಿಕ್ಷಣ, ಸ್ಪೋಕನ್ ಇಂಗ್ಲಿಷ್, ಟೇಲರಿಂಗ್, ಡ್ರೆಸ್ ಡಿಸೈನಿಂಗ್, ಪರ್ಸ್, ಬಳೆ, ವ್ಯಾನಿಟಿ ಬ್ಯಾಗ್, ಸ್ಕೂಲ್ ಬ್ಯಾಗ್ ಸೇರಿದಂತೆ 60 ಬಗೆಯ ಕರಕುಶಲ ವಸ್ತು ತಯಾರಿಕೆ ಕುರಿತು ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ಆರ್ಥಿಕ ತೊಂದರೆಯಿಂದ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದವರಿಗೆ ಮುಂದಿನ ಅಭ್ಯಾಸ ಮಾಡಲು ಪ್ರೋತ್ಸಾಹ ನೀಡಿ ಅವಕಾಶ ಮಾಡಿಕೊಡುತ್ತಿದ್ದಾರೆ. ಸಂಸ್ಥೆಯಿಂದ ಪ್ರಧಾನಮಂತ್ರಿ ಕೌಶಲ ಯೋಜನೆಯಡಿ ತರಬೇತಿ ಕೂಡ ನೀಡುತ್ತಿದ್ದಾರೆ. ಕೆಎಎಸ್, ಎಂಬಿಎ, ಟಿ.ಸಿ.ಎಚ್, ಡಿ.ಎಡ್, ಕಲಿತಿರುವ ಹಲವಾರು ವಿದ್ಯಾರ್ಥಿಗಳು ಸದ್ಯ ಬೇರೆ ಬೇರೆ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಮೂವರು ಮಾತೃ ಸಂಸ್ಥೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಆಡಳಿತ ಮಂಡಳಿಯವರ ಸಂತಸದ ನುಡಿ.

ಸರ್ಕಾರಿ ಯೋಜನೆ, ದಾನಿಗಳೇ ಆಧಾರ

ಇಕ್ವಿಪ್ ಇಂಡಿಯಾಗೆ ಬರುವವರಿಗೆ ಚಿಕಿತ್ಸೆ, ಶೈಕ್ಷಣಿಕ ಕಾರ್ಯ ಚಟುವಟಕೆ, ಊಟ, ವಸತಿ ಸೌಲಭ್ಯವಿದೆ. ಇಷ್ಟೆಲ್ಲ ಸೌಲಭ್ಯಕ್ಕೆ ಹಣ ಎಷ್ಟಿರಬಹುದು ಎಂದು ಎಲ್ಲರೂ ಹುಬ್ಬೇರಿಸಬಹುದು. ಆದರೆ ಹಣದ ವಿಚಾರಕ್ಕೆ ಚಿಂತಿಸಬೇಕಿಲ್ಲ. ಇಲ್ಲಿಗೆ ಬರುವವರಿಗೆ ಆರಂಭದಿಂದ ಉಚಿತ ಸೇವೆ ನೀಡಿದ ಆಡಳಿತ ಮಂಡಳಿ, 2 ವರ್ಷದಿಂದೀಚೆಗೆ ಪ್ರವೇಶ ದರ 10 ರೂ. ಹಾಗೂ ಚಿಕಿತ್ಸೆ, ತರಬೇತಿಗೆಂದು ತಲಾ 500 ರೂ. (1 ವರ್ಷದ ಅವಧಿಗೆ) ನಿಗದಿಪಡಿಸಿದೆ. ಅಂಗವಿಕಲರಿಗೆ ಹೆಚ್ಚಿನ ಹಣ ಬೇಕಾದಲ್ಲಿ ಸರ್ಕಾರ ಅಂಗವಿಕಲರಿಗಾಗಿ ರೂಪಿಸಿದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇದ್ದರೆ, ದಾನಿಗಳನ್ನು ಸಂರ್ಪಸಿ, ಅವರ ಮೂಲಕ ಖರ್ಚು ವೆಚ್ಚ ಭರಿಸಿಕೊಳ್ಳುತ್ತಿದ್ದಾರೆ.

40 ಫಲಾನುಭವಿಗಳು…

ಇಕ್ವಿಪ್ ಇಂಡಿಯಾ ಸಂಸ್ಥೆಯಲ್ಲಿ ಸದ್ಯ 40 ಫಲಾನುಭವಿ ಗಳಿದ್ದಾರೆ. ಇನ್ನೂ ಅರ್ಹರು ಬಂದರೆ ಸೇರಿಸಿಕೊಳ್ಳುತ್ತೇವೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯೂ ತಮ್ಮಲ್ಲಿ ಇದೆ ಎನ್ನುತ್ತಾರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಂಡ್ರೂಸ್ ಕಲ್ಲಬಂಡಿ.

ಹಳ್ಳಿಯಲ್ಲಿ ಇದ್ದಾಗ ನಡೆಯಲು ಆಗುತ್ತಿರಲಿಲ್ಲ. ನನ್ನಿಂದ ಏನೂ ಮಾಡಲು ಆಗುವುದಿಲ್ಲ ಎಂದುಕೊಂಡಿದ್ದೆ. ಇಕ್ವಿಪ್ ಇಂಡಿಯಾದವರು ನನ್ನನ್ನು ಇಲ್ಲಿಗೆ ಕರೆತಂದು ಒಳ್ಳೆಯ ಶಿಕ್ಷಣ ನೀಡಿದರು. ಸ್ವಾವಲಂಬಿ ಯಾಗಿ ಬದುಕುವ ಕುರಿತು ತರಬೇತಿ ನೀಡಿದರು. ಇದೀಗ ನಾನೂ ಬದುಕ ಬಲ್ಲೆ ಎಂಬ ಧೈರ್ಯ ಬಂದಿದೆ.

| ಬಸವರಾಜ ಗಂಡಗಾಯಿ ತರಬೇತಿ ಪಡೆದ ಅಂಗವಿಕಲ

 

ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ನಾನು ಎಸ್ಸೆಸ್ಸೆಲ್ಸಿ ಬಳಿಕ ಶಾಲೆ ಬಿಟ್ಟಿದ್ದೆ. ಇಕ್ವಿಪ್ ಇಂಡಿಯಾದವರು ನನ್ನನ್ನುಕರೆತಂದು 3 ತಿಂಗಳಲ್ಲಿ ಕಂಪ್ಯೂಟರ್ ಕಲಿಸಿಕೊಟ್ಟಿದ್ದಾರೆ. ಈಗ ಬೇರೆಡೆ ಕೆಲಸ ನೋಡುತ್ತಿದ್ದೇನೆ.

| ದೇವಕ್ಕ ಕರೇಗೌಡ್ರ ತರಬೇತಿ ಪಡೆದ ಅಂಗವಿಕಲೆ

 

 

 

ಅಂಗವಿಕಲರಿಗೆ ಸ್ವಾವಲಂಬಿ ಬದುಕು ಕಲ್ಪಿಸಿಕೊಡಲು ಸಂಸ್ಥೆ ಆರಂಭಿಸಿದ್ದೇವೆ. ಇದಕ್ಕೆ ಬಹಳಷ್ಟು ದಾನಿಗಳು ಸಹಕಾರ ನೀಡಿದ್ದಾರೆ.

| ವಿಜಯ ಭಾಸ್ಕರ್ ವ್ಯವಸ್ಥಾಪಕ ನಿರ್ದೇಶಕ ಇಕ್ವಿಪ್ ಇಂಡಿಯಾ ಪುನರ್ವಸತಿ ಕೇಂದ್ರ

 

ಒಂದೇ ವರ್ಷದಲ್ಲಿ ಸ್ವಾವಲಂಬಿ…

ಸಂಸ್ಥೆಗೆ ದಾಖಲಾಗುವ ಅಂಗವಿಕಲರು ಒಂದೇ ವರ್ಷದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಿದ್ಧವಾಗುತ್ತಾರೆ. ಅದಕ್ಕಾಗಿ ತಲಾ 4 ತಿಂಗಳು ಟೇಲರಿಂಗ್ ಹಾಗೂ ಕರಕುಶಲ ವಸ್ತು ತಯಾರಿಕೆ ಕುರಿತು ತರಬೇತಿ ನೀಡಲಾಗುತ್ತದೆ. 3 ತಿಂಗಳು ಅಲ್ಲಿಯೇ ಇಂಟರ್ನ್​ಶಿಪ್ ಮಾಡಬೇಕು. ಈ ಹಂತದಲ್ಲಿ ಅವರು ಮಾಡುವ ವಸ್ತುಗಳನ್ನು ವಿವಿಧ ವಸ್ತು ಪ್ರದರ್ಶನಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ಬಂದ ಹಣವನ್ನು ತಯಾರಕರಿಗೆ ನೀಡಲಾಗುತ್ತಿದೆ. ಅಲ್ಲದೆ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಯ ಸಹಾಯಧನದಿಂದ ಸ್ವಂತ ಉದ್ಯೋಗ ಕಂಡುಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.

ಸುರಕ್ಷತೆ…

ಇಕ್ವಿಪ್ ಇಂಡಿಯಾ ಕಟ್ಟಡ ಎರಡು ಅಂತಸ್ತು ಹೊಂದಿದ್ದು, 44 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಗವಿಕಲರು ವೀಲ್​ಚೇರ್ ಮೂಲಕ ಸಂಪೂರ್ಣ ಕಟ್ಟಡದಲ್ಲಿ ಸಂಚರಿಸಲು ಅನುಕೂಲವಾಗುವಂತೆ ಕಟ್ಟಡ ನಿರ್ವಿುಸಲಾಗಿದೆ. ಒಳಾಂಗಣ ಕ್ರೀಡಾಂಗಣ, ಊಟದ ಹಾಲ್ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ 32 ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ರಾತ್ರಿ ಸೆಕ್ಯುರಿಟಿ ಗಾರ್ಡ್ಸ್​ ಇರುತ್ತಾರೆ.

ಉಚಿತವಾಗಿ ಕೊಟ್ಟರೂ, ತೆರಿಗೆ ಕಟ್ಟಬೇಕು

ಅಮೆರಿಕಾದ ಜಾನಿ ಆಂಡ್ ಫ್ರೆಂಡ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಉಚಿತವಾಗಿ ಗಾಲಿ ಕುರ್ಚಿ ಕಳುಹಿಸಿಕೊಡಲಾಗುತ್ತಿದೆ. ಆದರೆ ಅವುಗಳನ್ನು ತೆಗೆದುಕೊಳ್ಳಲು ಇಲ್ಲಿ 3 ಲಕ್ಷ ರೂ.ವರೆಗೂ ತೆರಿಗೆ ಕಟ್ಟಬೇಕಾಗಿದೆ. ಇದನ್ನು ಉಚಿತ ಮಾಡಿಕೊಳ್ಳುವ ಸಲುವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ಗ್ರಾಮೀಣರಿಗೆ ಜಾಗೃತಿ ಕಾರ್ಯಕ್ರಮ…

ಪ್ರತಿ ವರ್ಷ 43 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಂಗವಿಕಲರ ಸ್ವ-ಸಹಾಯ ಸಂಘ ರಚಿಸಿ, ಅವರಿಗೆ ಆರ್ಥಿಕವಾಗಿ ಬೆಳೆಯುವ ಕುರಿತು ತರಬೇತಿ ನೀಡುತ್ತೇವೆ. ಅಂಗವಿಕಲ ಮಕ್ಕಳನ್ನು ಮನೆಯಿಂದ ಹೊರಗೆ ಬಿಡದ ಕುಟುಂಬಗಳಿಗೆ ಅವರೂ ಸ್ವಾವಲಂಬಿಯಾಗಿ ಬದುಕುವ ಕುರಿತು ತಿಳಿಹೇಳಿ, ಅವರ ಒಪ್ಪಿಗೆ ಪಡೆದು ಪುನರ್ವಸತಿ ಕೇಂದ್ರಕ್ಕೆ ಕರೆತರುತ್ತೇವೆ. ಇಲ್ಲಿಗೆ ಯಾರು ಬೇಕಾದರೂ ಬಂದು ಕಲಿಯಬಹುದು ಎಂದು ಕೇಂದ್ರದ ಕಾರ್ಯಕ್ರಮ ನಿರ್ದೇಶಕಿ ಶಿಲ್ಪಾ ಬ್ಯಾರಿ ವಿಜಯವಾಣಿಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

22 ವರ್ಷದಲ್ಲಿ ಇಕ್ವಿಪ್ ಇಂಡಿಯಾ ಸೇವೆ…

  1. 4 ಸಾವಿರ ಅಂಗವಿಕಲರಿಗೆ ಶಿಕ್ಷಣ
  2. 183 ಅಂಗವಿಕಲರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
  3. 5375 ಅಂಗವಿಕಲರಿಗೆ ಚಲನಾತ್ಮಕ ಸಲಕರಣೆ ವಿತರಣೆ
  4. 276 ಅಂಗವಿಕಲ ಮಹಿಳೆಯರಿಗೆ ತರಬೇತಿ
  5. 713 ಮಕ್ಕಳಿಗೆ ವಸತಿ ಸೌಲಭ್ಯ
  6. 1399 ಮಕ್ಕಳಿಗೆ ವಿದ್ಯಾಭ್ಯಾಸ
  7. 100 ಅಂಗವಿಕಲರಿಗೆ ಉದ್ಯೋಗ
  8. 250 ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ

Leave a Reply

Your email address will not be published. Required fields are marked *