More

    ಮಧ್ಯವರ್ತಿಗಳು ಹಣ ಕೇಳಿದರೆ ದೂರು ನೀಡಿ

    ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮನವಿ

    ವಿಕಲಚೇತನರ ಯೋಜನೆಗಳ ಬಗ್ಗೆ ಮಾಹಿತಿ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಜಿಲ್ಲೆಯ ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳಡಿ ಸೌಲಭ್ಯ ಒದಗಿಸಲಾಗುತ್ತಿದ್ದು, ಸೌಲಭ್ಯ ಪಡೆಯಲು ಮಧ್ಯವರ್ತಿಗಳ ಆಶ್ರಯಿಸುವ ಅಗತ್ಯವಿಲ್ಲ. ಈ ಯೋಜನೆ ತಲುಪಿಸಲು ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ತಕ್ಷಣ ದೂರು ನೀಡಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್.ಎಂ.ಜಗದೀಶ್ ತಿಳಿಸಿದ್ದಾರೆ.
    ಜಿಲ್ಲೆಯ ಅಂಗವಿಕಲರ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳಡಿ ನೀಡಲಾಗುತ್ತಿರುವ ಸೌಲಭ್ಯ ಕುರಿತು ಬುಧವಾರ ದೇವನಹಳ್ಳಿಯ ಇಲಾಖೆ ಕಚೇರಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು. ಇಲಾಖಾ ಯೋಜನೆಗಳಾದ ಯಂತ್ರಚಾಲಿತ ಮೋಟಾರು ವಾಹನ, ಶ್ರವಣ ದೋಷವುಳ್ಳ ಅಂಗವಿಕಲರಿಗೆ ಹೊಲಿಗೆ ಯಂತ್ರ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಅಂಗವಿಕಲರಿಗೆ ಪ್ರೋತ್ಸಾಹಧನ, ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ, ಸಾಧನ ಸಲಕರಣೆ ವಿತರಣೆ, ಸ್ವಯಂ ಉದ್ಯೋಗಕ್ಕೆ ಆಧಾರ ಯೋಜನೆ, ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಅಂಧ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್ ಟಾಪ್ ಹಾಗೂ ಬ್ರೆಲ್ ಕಿಟ್, ಅಂಧ ಮಹಿಳೆಯರ ಮಕ್ಕಳ ಶಿಶು ಪಾಲನೆಗಾಗಿ ಭತ್ಯೆ, ಅಂಗವಿಕಲರನ್ನು ಸಾಮಾನ್ಯರು ವಿವಾಹವಾದಲ್ಲಿ ವಿವಾಹ ಪ್ರೋತ್ಸಾಹಧನ ಹಾಗೂ ಇಲಾಖೆಯ ಅನುದಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸುತ್ತಿರುವ ಹಾಗೂ ಇತರ ಎಲ್ಲ ಆನ್‌ಲೈನ್ ಹಾಗೂ ಆಪ್‌ಲೈನ್ ಯೋಜನೆಗಳು ಸಂಪೂರ್ಣವಾಗಿ ಉಚಿತವಾಗಿದ್ದು ಇಲಾಖೆಯಿಂದ ಯಾವುದೇ ಶುಲ್ಕ ನಿಗದಿ ಪಡಿಸಿರುವುದಿಲ್ಲ ಎಂದು ತಿಳಿಸಿದರು.
    ಯೋಜನೆಗಳು ಉಚಿತವಾಗಿರುವುದರಿಂದ ಮಧ್ಯವರ್ತಿಗಳ ಸಂಪರ್ಕವಿಲ್ಲದೆ ನೇರವಾಗಿ ನಿಮ್ಮ ಗ್ರಾಮ, ನಗರ, ತಾಪಂಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮೀಣ, ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಉಚಿತವಾಗಿ ಇಲಾಖಾ ಸೌಲಭ್ಯಗಳ ಮಾಹಿತಿ ಹಾಗೂ ಅನುಕೂಲ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಇಲಾಖಾ ಯೋಜನೆಗಳಿಗಾಗಿ ಯಾವುದೇ ಮಧ್ಯವರ್ತಿಗಳು ಅಂಗವಿಕಲರಿಗೆ ಹಣದ ಬೇಡಿಕೆ ಇಟ್ಟರೆ ಲೋಕಾಯುಕ್ತರಿಗೆ ನೇರವಾಗಿ ದೂರು ನೀಡಬಹುದು ಹಾಗೂ ಪತ್ರದ ಮೂಲಕ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದರು.
    ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿರುವ ಅಂಗವಿಕಲರ ಮಾಹಿತಿ ಸಲಹಾ ಕೇಂದ್ರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸಬಹುದು ಅಥವಾ ದೂರವಾಣಿ 080-29787441 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts