ಇಮ್ರಾನ್​ ಖಾನ್ ಮುತ್ಸದ್ಧಿಯೇ ಆಗಿದ್ದರೆ ಜೈಷ್​ ಮುಖ್ಯಸ್ಥ​ ಮಸೂದ್​ ಅಜರ್​ನನ್ನು ನಮಗೊಪ್ಪಿಸಲಿ…

ನವದೆಹಲಿ: ನಿಮ್ಮ ನೆಲದಲ್ಲಿ ಚಟುವಟಿಕೆಯಿಂದಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನಿಮ್ಮೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರು ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.

ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವು ಜನ ಇಮ್ರಾನ್​ರನ್ನು ಒಳ್ಳೆಯ ಮುತ್ಸದ್ಧಿ ಎಂದು ಹೇಳುತ್ತಾರೆ. ಒಂದು ವೇಳೆ ಅವರು ಮುತ್ಸದ್ಧಿಯೇ ಆಗಿದ್ದರೆ, ಜೈಷ್​​ ಎ ಮಹಮ್ಮದ್​ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನನ್ನು ನಮಗೆ ಹಸ್ತಾಂತರಿಸಲಿ, ಅವರೆಷ್ಟು ಮುತ್ಸದ್ಧಿ ಎಂದು ನಾವು ನೋಡುತ್ತೇವೆ ಎಂದು ತಿಳಿಸಿದ್ದಾರೆ.

ಉಗ್ರರನ್ನು ನಿರ್ನಾಮ ಮಾಡುವಲ್ಲಿ ಪಾಕ್​ ಜತೆ ಕೈಜೋಡಿಸಲು ನಾವು ತಯಾರಿದ್ದೇವೆ. ಉಗ್ರತ್ವ ಮತ್ತು ಸಂಧಾನ ಒಟ್ಟಿಗೆ ಹೋಗಲಾರದು ಎಂದು ಪಾಕ್​ಗೆ ಖಡಕ್​ ಸಂದೇಶ ರವಾನಿಸಿದ್ದಾರೆ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ನಾವು ನಿರ್ದಿಷ್ಟವಾಗಿ ಬಾಲಾಕೋಟ್​ನಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ಮಾಡಿದೆವು. ಆದರೆ, ಪಾಕಿಸ್ತಾನ ಸೇನೆ ಉಗ್ರರ ಪರವಾಗಿ ನಮ್ಮ ಮೇಲೇಕೆ ದಾಳಿ ಮಾಡುತ್ತಿದೆ ಎಂದು ಪ್ರಶ್ನಿಸಿದರು.

ನೀವು ಜೈಷ್​ ಸಂಘಟನೆಯನ್ನು ಮಾತ್ರ ನಿಮ್ಮ ನೆಲದಲ್ಲಿ ಇಟ್ಟುಕೊಂಡಿಲ್ಲ. ಬದಲಾಗಿ ಅದಕ್ಕೆ ನೀರೆರೆದು ನೀವೇ ಪೋಷಿಸುತ್ತಿದ್ದೀರಿ, ಉಗ್ರರ ದಾಳಿಯ ಸಂತ್ರಸ್ತ ದೇಶವು ಪ್ರತೀಕಾರಕ್ಕಾಗಿ ದಾಳಿ ಮಾಡಿದಾಗ ನೀವು ಉಗ್ರರ ಪರವಾಗಿ ದಾಳಿ ಮಾಡುತ್ತೀರಿ ಎಂದು ಪಾಕ್​ ಸರ್ಕಾರಕ್ಕೆ ಕುಟುಕಿದ್ದಾರೆ. (ಏಜೆನ್ಸೀಸ್​)