ಮುಂದುವರಿದ ಕೈಮಗ್ಗ ನೇಕಾರರ ಧರಣಿ

ರಬಕವಿ/ಬನಹಟ್ಟಿ: ಕೆಎಚ್​ಡಿಸಿ ನಿಗಮದಡಿಯ ಕೈಮಗ್ಗ ನೇಕಾರರ ಪರಿಸ್ಥಿತಿ, ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದು ಸಮಸ್ಯೆಗೆ ಸ್ಪಂದಿಸುವೆ. ನನ್ನನ್ನು ನಂಬಿ ಹೋರಾಟ ಕೈಬಿಡಬೇಕು ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮನವಿ ಮಾಡಿದರು.

ಬನಹಟ್ಟಿ ನಗರದ ಕೆಎಚ್​ಡಿಸಿ ಪ್ರಧಾನ ಕಚೇರಿ ಆವರಣದಲ್ಲಿ ಕೈಮಗ್ಗ ನೇಕಾರರು 5 ದಿನದಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿ, ಸಮಸ್ಯೆಗಳ ಕುರಿತು ಸಚಿವರು, ಆಡಳಿತ ಮಂಡಳಿ ವ್ಯವಸ್ಥಾಪಕರೊಂದಿಗೆ ರ್ಚಚಿಸಲಾಗುವುದು. ನಿರಂತರ ಉದ್ಯೋಗ ಜತೆಗೆ ಪದೇ ಪದೆ ಈ ರೀತಿಯ ಸಮಸ್ಯೆ ಎದುರಾಗದಂತೆ ಮಾಡುವ ಜವಾಬ್ದಾರಿ ನಮ್ಮದು. ತಾಂತ್ರಿಕ ತೊಂದರೆ ಕಾರಣ ಕೆಲ ಬೇಡಿಕೆಗಳು ಸುಲಭವಾಗಿ ಇಡೇರುವುದಿಲ್ಲ. ಧರಣಿ ಹಿಂಪಡೆಯಿರಿ, ಈ ಸಮಸ್ಯೆ ಕುರಿತು ಸರ್ಕಾರ ಮಟ್ಟದಲ್ಲಿ ರ್ಚಚಿಸೋಣ ಎಂದು ಶಾಸಕ ನ್ಯಾಮಗೌಡರು ನೇಕಾರರಿಗೆ ಮನವರಿಕೆ ಮಾಡಿದರು. ಧರಣಿ ನಿರತ ನೇಕಾರರು ಪ್ರತಿಕ್ರಿಯಿಸಿ, ಸಾಕಷ್ಟು ಪ್ರಯತ್ನದಿಂದ ಹೋರಾಟ ನಡೆಯುತ್ತಿದೆ. ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ದೊರಕುವವರೆಗೂ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದರು.

ಉತ್ಪಾದನಾ ವಿಭಾಗದ ವ್ಯವಸ್ಥಾಪಕ ಚಿದಾನಂದ ಕೊಡತೆ ಮಾತನಾಡಿ, ನಿರಂತರ ಉದ್ಯೋಗಕ್ಕೆ ಸಂಬಂಧಿಸಿ ಸರ್ಕಾರ 9.35 ಕೋಟಿ ರೂ. ಖರೀದಿ ಹಾಗೂ ವೇತನಕ್ಕೆ ಮೀಸಲಿಟ್ಟಿದೆ. ಟೆಂಡರ್ ಪ್ರಕ್ರಿಯೆಯೂ ನಡೆಯುತ್ತಿದೆ. ಕಚ್ಚಾ ವಸ್ತು ನಿಗಮದಲ್ಲಿದೆ. ನೇಕಾರರ ಡಚ್ ಯೋಜನೆಯಡಿ ನಿರ್ವಿುತ ಗೊಂಡಿರುವ ಮನೆಗಳ ಸಾಲ ಹಾಗೂ ಬಡ್ಡಿ ಸಂಪೂರ್ಣ ಮನ್ನಾ ಆಗಿದೆ. ಇದಕ್ಕೆ ಸಂಬಂಧಿಸಿ ವೈಯಕ್ತಿಕ ಮನೆ ಕಾಗದ ಪತ್ರಗಳನ್ನು ನೀಡಲು ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಕೆಎಚ್​ಡಿಸಿಗೆ ಪರಿವರ್ತಿಸುವ ಅವಶ್ಯಕತೆ ಇದೆ ಎಂದರು.

ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷದ ಶಿವನಿಂಗ ಟಿರಕಿ ಮಾತನಾಡಿ, ಬೇಡಿಕೆಗಳು ಈಡೇರುವವರೆಗೆ ಧರಣಿ ನಿಲ್ಲುವುದಿಲ್ಲ. ಶಾಸಕರು ಸರ್ಕಾರದೊಂದಿಗೆ ರ್ಚಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು. ಸದಾಶಿವ ಗೊಂದಕರ, ಯೋಜನಾ ಅಭಿವೃದ್ಧಿ ವ್ಯವಸ್ಥಾಪಕ ರಾಮಚಂದ್ರಪ್ಪ, ವಿಜಯಕುಮಾರ ಉಪಸ್ಥಿತರಿದ್ದರು.