More

    ಎಐಸಿಸಿ ಸೂಚನೆಗೆ ಕಾಯ್ದಿರುವ ಕೈ ನಾಯಕರು

    ಬೆಂಗಳೂರು: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ, ಪ್ರತಿಪಕ್ಷ-ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕ ಸಂಬಂಧ ಹೈಕಮಾಂಡ್ ತೀರ್ವನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಎದುರು ನೋಡುತ್ತಿದ್ದಾರೆ.

    ನವದೆಹಲಿಗೆ ಬರುವಂತೆ ಹೈಕಮಾಂಡ್ ಈವರೆಗೆ ಆಹ್ವಾನ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕರ ಆಪ್ತರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಪಕ್ಷದ ಹಿರಿಯ ನಾಯಕರೆಲ್ಲರೂ ಒಟ್ಟಾಗಿ ಹೈಕಮಾಂಡ್ ಭೇಟಿ ಮಾಡುವ ಬಗ್ಗೆ ಸಹ ಇನ್ನೂ ಸ್ಪಷ್ಟತೆ ಮೂಡಿಲ್ಲ. ಉಪಚುನಾವಣೆ ಸೋಲಿನ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಮತ್ತು ಪ್ರತಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದರು.

    ಇದೇ ಬೆಳವಣಿಗೆ ನಿರೀಕ್ಷಿಸಿದ್ದ ಮೂಲ ಕಾಂಗ್ರೆಸಿಗರ ಗುಂಪು, ಪರ್ಯಾಯ ನಾಯಕತ್ವ ಸೃಷ್ಟಿಗೆ ಪ್ರಯತ್ನ ನಡೆಸಿತ್ತು. ಎಐಸಿಸಿ ಈಗಾಗಲೇ ಹಿರಿಯ ನಾಯಕ ಮಧುಸೂಧನ ಮಿಸ್ತ್ರಿ ಅವರನ್ನು ರಾಜ್ಯಕ್ಕೆ ಕಳಿಸಿ ಅಭಿಪ್ರಾಯ ಸಂಗ್ರಹಿಸಿದೆ. ಹೈಕಮಾಂಡ್ ಎರಡನೇ ಹಂತದಲ್ಲಿ ಪ್ರಮುಖ ನಾಯಕರಿಂದ ಅಭಿಪ್ರಾಯ ಕೇಳಿದೆ. ಇನ್ನೇನು ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಪಕ್ಷದ ತೀರ್ಮಾನ ಹಲವು ನಾಯಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ. ಪಕ್ಷದೊಳಗೆ ಗುಂಪಾಗಿ ನಾಯಕತ್ವ ಬದಲಾವಣೆಗೆ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಒಂದು ತಂಡಕ್ಕೆ ಮೇಲುಗೈ ಆದರೂ ಒಂದಷ್ಟು ಕಸಿವಿಸಿ ಬೆಳವಣಿಗೆ ನಡೆಯುವುದು ನಿಚ್ಚಳ. ಜತೆಗೆ ಮೂಲೆ ಗುಂಪು ಮಾಡುವ ಪ್ರಯತ್ನವೂ ನಡೆಯುವುದು. ಈ ಕಾರಣದಿಂದ ಹೈಕಮಾಂಡ್ ಕರೆ ಮಹತ್ವದ್ದಾಗಿದ್ದು, ರಾಜ್ಯದ ಹತ್ತಾರು ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ.

    ರಾಜ್ಯಾದ್ಯಂತ ಆತ್ಮಹತ್ಯೆಗೆ ಶರಣಾದ ರೈತರ ಮನೆಗೆ ಕಾಂಗ್ರೆಸ್ ನಿಯೋಗ

    ರಾಜ್ಯದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿ ಸತ್ಯಶೋಧನಾ ವರದಿ ಸಿದ್ಧಪಡಿಸಲು ಕಾಂಗ್ರೆಸ್ ಮುಂದಾ ಗಿದೆ. ಇತ್ತೀಚಿಗೆ ನಿಧನರಾದ ರೈತರ ಮನೆಗಳಿಗೆ ಭೇಟಿ ನೀಡಲು ವೇಳಾಪಟ್ಟಿ ಸಿದ್ಧಪಡಿಸಲಾಗಿದ್ದು, ಗುರುವಾರದಿಂದಲೇ ಕಾಂಗ್ರೆಸ್ ನಿಯೋಗ ಕಾರ್ಯ ಪ್ರವೃತ್ತವಾಗಲಿದೆ. ಒಬ್ಬೊಬ್ಬರ ಮನೆಗೆ ತೆರಳಿ ವರದಿ ಸಿದ್ಧಗೊಂಡ ಬಳಿಕ ಅದನ್ನು ಪಕ್ಷದ ವರಿಷ್ಠರು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಅವರ ಮನೆಯ ಸ್ಥಿತಿಗತಿ? ಅವರ ಕೃಷಿ ಸೋಲಿಗೆ ಕಾರಣವೇನು? ಇದಕ್ಕೆ ಯಾರು ಹೊಣೆ ಎಂಬಿತ್ಯಾದಿ ಮಾಹಿತಿ ಜತೆ ಸರ್ಕಾರದ ಜವಾಬ್ದಾರಿಯನ್ನು ವರದಿಯಲ್ಲಿ ಅಡಕಗೊಳಿಸಲಾಗುತ್ತದೆ. ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಅಧ್ಯಕ್ಷತೆಯ ತಂಡ ಮೊದಲ ಹಂತದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ನಡೆಸುತ್ತಿದೆ. ಜ.2ರಂದು ಕೊಪ್ಪ, 3ರಂದು ಶೃಂಗೇರಿ, 4ರಂದು ಎನ್​ಆರ್ ಪುರ, 8ರಂದು ತರೀಕೆರೆ ತಾಲೂಕಲ್ಲಿ ರೈತರ ಮನೆಗೆ ಭೇಟಿ ಕೊಡುವುದು. ಕೆಪಿಸಿಸಿ, ಜಿಲ್ಲಾ ಘಟಕ, ಬ್ಲಾಕ್ ಘಟಕದವರು ಸೇರಿ ಕಿಸಾನ್ ಘಟಕದ ಪದಾಧಿಕಾರಿಗಳು ತಂಡದಲ್ಲಿರಲಿದ್ದಾರೆಂದು ಸಚಿನ್ ಮೀಗಾ ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts