More

    ಕೈ ಕಿತ್ತಾಟ ತೀವ್ರ

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಪಕ್ಷದ ಎರಡು ಬಣಗಳ ನಡುವೆ ಹಲವು ವಾರಗಳಿಂದ ನಡೆಯುತ್ತಿರುವ ಶೀತಲ ಸಮರ ತೀವ್ರಗೊಂಡಿದ್ದು, ತಮಗೆ ಸಿಗದ್ದು ಮತ್ತೊಬ್ಬರಿಗೂ ಬೇಡವೆಂಬ ‘ಅವಕಾಶ ತಪ್ಪಿಸುವ’ ರಾಜಕಾರಣದ ದಾಳ ಉರುಳಿಸಲಾಗುತ್ತಿದೆ. ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿ ಮತ್ತು ಪ್ರತಿಪಕ್ಷ ನಾಯಕ- ಶಾಸಕಾಂಗ ಪಕ್ಷ ನಾಯಕ ಸ್ಥಾನ ಬೇರ್ಪಡಿಸುವ ವಿಚಾರದಲ್ಲಿ ತಿಕ್ಕಾಟ ಜೋರಾಗಿದೆ. ಈ ವಿಚಾರದಲ್ಲಿ ನಾಯಕರು ಬಹಿರಂಗ ಹೇಳಿಕೆ ನೀಡಲು ಆರಂಭಿಸಿದ್ದಾರೆ.

    ಇಡೀ ಬೆಳವಣಿಗೆಯನ್ನು ಸಮಗ್ರವಾಗಿ ಅವಲೋಕಿಸಿದರೆ, ಪಕ್ಷದ ಮೇಲೆ ಹಿಡಿತ ಮುಂದುವರಿಸಲು ಸಿದ್ದರಾಮಯ್ಯ ಹೂಡಿದ ತಂತ್ರಕ್ಕೆ ಹಿರಿಯರೆಲ್ಲರೂ ಒಗ್ಗಟ್ಟಾಗಿ ಪ್ರತಿತಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ. ಶಾಸಕಾಂಗ ಪಕ್ಷದ ನಾಯಕ ಸ್ಥಾನ- ಪ್ರತಿಪಕ್ಷ ನಾಯಕ ಸ್ಥಾನವನ್ನು (ಸಿಎಲ್​ಪಿ-ಎಲ್​ಒಪಿ) ಯಾವುದೇ ಕಾರಣಕ್ಕೂ ಬೇರೆ ಮಾಡಕೂಡದು ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೈಕಮಾಂಡ್ ಮುಂದೆ ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರ ವಿರೋಧಿ ಗುಂಪು ಎರಡೂ ಹುದ್ದೆ ಪ್ರತ್ಯೇಕಿಸಲೇಬೇಕೆಂದು ಹಠ ಹಿಡಿದಿದೆ.

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಶಿಫಾರಸನ್ನು ಹೈಕಮಾಂಡ್ ಮಾನ್ಯ ಮಾಡದೇ ಹೋದಲ್ಲಿ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಸುವುದು ಸಿದ್ದರಾಮಯ್ಯ ಲೆಕ್ಕಾಚಾರ ಎಂದು ಹಿರಿಯ ನಾಯಕರು ನಂಬಿದ್ದಾರೆ. ಈ ಕಾರಣಕ್ಕೆ ಕಾರ್ಯಾಧ್ಯಕ್ಷ ಸ್ಥಾನದ ಬಗ್ಗೆ ಒಬ್ಬೊಬ್ಬರಾಗಿ ಅಭಿಪ್ರಾಯ ನೀಡುತ್ತಿದ್ದಾರೆ.

    ದನಿಗೂಡಿಸಿದ ನಾಯಕರು: ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್ ಸೋಮವಾರ ಹೇಳಿಕೆ ನೀಡಿ ಈ ಬೆಳವಣಿಗೆಗೆ ಮುನ್ನುಡಿ ಬರೆದಿದ್ದರು. ಇದೀಗ ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅದೇ ಧಾಟಿಯನ್ನು ಮುಂದುವರಿಸಿದ್ದಾರೆ. ‘ಪಕ್ಷಕ್ಕೆ ಬಂದ ಮೇಲೆ ತಾರತಮ್ಯ ಇರಬಾರದು. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದು 14 ವರ್ಷ ಆಯಿತು. ಪಕ್ಷದಲ್ಲಿ 40 ವರ್ಷ ದುಡಿದವರೂ ಇದ್ದಾರೆ. ಖರ್ಗೆ, ಎಚ್.ಕೆ. ಪಾಟೀಲ್, ಹರಿಪ್ರಸಾದ್, ನಾನು ಎಲ್ಲರೂ ಅವರಿಗೆ (ಸಿದ್ದರಾಮಯ್ಯ) ಉತ್ತಮ ಅವಕಾಶ ಕೊಟ್ಟಿದ್ದೇವೆ. ಎಲ್ಲರೂ ಸರಿಯಾಗಿ ನಡೆದುಕೊಂಡರೆ ಈ ಅಸಮಾಧಾನ ಬರಲ್ಲ’ ಎಂದು ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಮಾರ್ವಿುಕ ಅಭಿಪ್ರಾಯ ನೀಡಿದ್ದಾರೆ.

    ಮಾಜಿ ಸಚಿವ ಎಚ್.ಕೆ. ಪಾಟೀಲ್, ‘ಮಹಾರಾಷ್ಟ್ರದಲ್ಲಿ ಸಿಎಲ್ಪಿ ಮತ್ತು ವಿಪಕ್ಷ ಸ್ಥಾನ ಹಂಚಿಕೆ ಆಗಿತ್ತು. ಸಮ್ಮಿಶ್ರ ಸರ್ಕಾರ ಇದ್ದಾಗ ಹುದ್ದೆ ವಿಭಾಗವಾಗಿತ್ತು. ಕೇಂದ್ರದಲ್ಲಿ ಯುಪಿಎ ಅವಧಿಯಲ್ಲಿ ಸೋನಿಯಾ ಗಾಂಧಿ ಸೇರಿ ಹುದ್ದೆ ಹಂಚಿಕೆ ಆಗಿತ್ತು. ನಮ್ಮಲ್ಲೂ ಮಹಾರಾಷ್ಟ್ರ ಮತ್ತು ಯುಪಿಎ ಮಾದರಿಯಲ್ಲೇ ಸ್ಥಾನ ಹಂಚಿಕೆ ಆಗಲಿ. ನಮ್ಮದು ರಾಷ್ಟ್ರೀಯ ಪಕ್ಷ. ದೇಶಕ್ಕೆ ಒಂದೇ ಮಾದರಿ ಇರಬೇಕು’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾಲ್ಕು ಕಾರ್ಯಾಧ್ಯಕ್ಷ ಸ್ಥಾನದ ಅವಶ್ಯಕತೆ ಇಲ್ಲ ಎಂದೂ ಹೇಳಿದ್ದಾರೆ.

    ‘ಅಧ್ಯಕ್ಷರ ಆಯ್ಕೆ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು. ಶಾಸಕಾಂಗ ನಾಯಕ (ಸಿಎಲ್​ಪಿ) ಮತ್ತು ವಿಪಕ್ಷ ನಾಯಕ (ಎಲ್​ಒಪಿ) ಸ್ಥಾನವನ್ನು ಒಬ್ಬೊಬ್ಬರಿಗೆ ನೀಡುವ ಪದ್ಧತಿಯನ್ನು ಮಹಾರಾಷ್ಟ್ರದಲ್ಲಿ ಜಾರಿಗೆ ತಂದಿದ್ದೇವೆ. ಮಹಾರಾಷ್ಟ್ರ ಉಸ್ತುವಾರಿ ಆಗಿರುವ ನಾನು ಸಹಮತ ವ್ಯಕ್ತಪಡಿಸಿದ್ದೆ. ಆದರೆ ರಾಜ್ಯದ ವಿಚಾರದಲ್ಲಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಗೊತ್ತಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯ ಅಭಿಪ್ರಾಯ ನೀಡಿದ್ದಾರೆ.

    ಈ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮದ ಮುಂದೆ ಬಂದು, ತಮಗೂ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನದ ಪ್ರಸ್ತಾಪಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ‘ನಾನು ಅಭಿಪ್ರಾಯವನ್ನು ಹೈಕಮಾಂಡ್​ಗೆ ತಿಳಿಸಿದ್ದೇನೆ. ಈ ಹಿಂದೆ ದೇಶಪಾಂಡೆ ಅವಧಿಯಲ್ಲಿಯೂ ಕಾರ್ಯಾಧ್ಯಕ್ಷರು ಇದ್ದರು. ಡಿ.ಕೆ. ಶಿವಕುಮಾರ್ ಅವರೇ ಆಗಿದ್ದರು. ಈಗಲೂ ಈಶ್ವರ್ ಖಂಡ್ರೆ ಇದ್ದಾರೆ. ಕಾರ್ಯಾಧ್ಯಕ್ಷರು ಬೇಕೆಂದು ನಾನೇ ಒತ್ತಡ ಹಾಕಿದ್ದೇನೆ ಎಂದು ಸೃಷ್ಟಿ ಮಾಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

    ಲೆಕ್ಕಾಚಾರಗಳು

    ಡಿ.ಕೆ. ಶಿವಕುಮಾರ್​ಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಹೈಕಮಾಂಡ್ ಒಲವು ವ್ಯಕ್ತಪಡಿಸಿದ್ದರಿಂದ ಅವರನ್ನು ಕಟ್ಟಿಹಾಕುವುದಕ್ಕಾಗಿಯೇ ನಾಲ್ವರು ಕಾರ್ಯಾಧ್ಯಕ್ಷರು ಇರಬೇಕೆಂದು ಸಿದ್ದರಾಮಯ್ಯ ಬಣ ತಂತ್ರ ರೂಪಿಸಿದೆ ಎಂಬುದು ಎದುರಾಳಿ ತಂಡದ ವಾದ.

    ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವುದಾದರೆ ಪ್ರತಿಪಕ್ಷ ಸ್ಥಾನ- ಶಾಸಕಾಂಗ ಪಕ್ಷ ನಾಯಕ ಸ್ಥಾನವೂ ಬೇರೆಯಾಗಲಿ ಎಂದು ಹಿರಿಯರ ತಂಡ ಹೈಕಮಾಂಡ್ ಮುಂದೆ ಅಭಿಪ್ರಾಯ ಮುಂದಿಟ್ಟಿದೆ. ಹೀಗೆ ಮಾಡಿದರೆ ಸಿದ್ದರಾಮಯ್ಯ ಶಕ್ತಿ ಕುಂದಲಿದೆ ಎಂಬ ನಂಬಿಕೆ.

    ಡಿ.ಕೆ. ಶಿವಕುಮಾರ್ ಅಧ್ಯಕ್ಷರಾದರೆ, ಸತೀಶ್ ಜಾರಕಿಹೊಳಿ, ಧ್ರ್ರುವನಾರಾಯಣ್ ಅಥವಾ ಮಹದೇವಪ್ಪ, ಯು.ಟಿ ಖಾದರ್ ಮತ್ತು ಈಶ್ವರ ಖಂಡ್ರೆ ಕಾರ್ಯಾಧ್ಯಕ್ಷರಾಗಿರುತ್ತಾರೆ. ಇವರೆಲ್ಲರೂ ಸಿದ್ದರಾಮಯ್ಯ ಪರ ಒಲವು ಹೊಂದಿರುವವರು. ಹೀಗಾಗಿ ಇದು ಡಿಕೆಶಿ ಹಣಿಯುವ ಕಾರ್ಯತಂತ್ರ ಎಂದೂ ಹೇಳಲಾಗುತ್ತಿದೆ.

    ಸಿದ್ದರಾಮಯ್ಯ ಕೈಗೆ ನಾಯಕತ್ವ ಕೊಡುವುದನ್ನು ತಪ್ಪಿಸಬೇಕು, ಸಾಮೂಹಿಕ ನಾಯಕತ್ವ ಇರಲಿ. ಅವರು ನಾಯಕರ ಸಾಲಿನಲ್ಲಿದ್ದರೆ ಸಾಕು ಎಂಬುದು ಹಿರಿಯರ ಅಭಿಪ್ರಾಯ. ಇದನ್ನೇ ಹೈಕಮಾಂಡ್​ಗೂ ವಿವರಿಸಿದ್ದಾರೆ.

    ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಅವರು ಕಾರ್ಯಾಧ್ಯಕ್ಷರು ಬೇಡ ಎನ್ನುತ್ತಿದ್ದಾರೆ. ಅದು ಅವರ ಅಭಿಪ್ರಾಯ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ನನ್ನ ಅಭಿಪ್ರಾಯವನ್ನು ಹೈಕಮಾಂಡ್​ಗೆ ತಿಳಿಸಿದ್ದೇನೆ.

    | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

    ಸಿಎಲ್​ಪಿ-ಎಲ್​ಒಪಿ ಪ್ರತ್ಯೇಕ ಮಾಡಿದರೆ ರಾಜೀನಾಮೆ ಕೊಡ್ತೀನಿ ಅನ್ನೋದು ಸಿದ್ದರಾಮಯ್ಯ ವೈಯಕ್ತಿಕ ಅಭಿಪ್ರಾಯ. ಅದಕ್ಕೆ ಅವರದೇ ಆದ ಕಾರಣಗಳಿರಬಹುದು. ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ.

    | ಜಿ.ಪರಮೇಶ್ವರ್ ಕೆಪಿಸಿಸಿ ಮಾಜಿ ಅಧ್ಯಕ್ಷ

    ಸಿಎಲ್​ಪಿ ಮತ್ತು ಎಲ್​ಒಪಿ ಸ್ಥಾನವನ್ನು ಒಬ್ಬೊಬ್ಬರಿಗೆ ನೀಡುವ ಪದ್ಧತಿಯನ್ನು ಮಹಾರಾಷ್ಟ್ರದಲ್ಲಿ ಜಾರಿಗೆ ತಂದಿದ್ದೇವೆ. ಮಹಾರಾಷ್ಟ್ರ ಉಸ್ತುವಾರಿ ಆಗಿರುವ ನಾನು ಸಹಮತ ವ್ಯಕ್ತಪಡಿಸಿದ್ದೆ.

    | ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕ

    1-2 ಕಾರ್ಯಾಧ್ಯಕ್ಷ ಹುದ್ದೆ ನೇಮಕಕ್ಕೆ ನಮ್ಮ ಅಭ್ಯಂತರ ಇಲ್ಲ. ಸಿಎಲ್ಪಿ-ಎಲ್​ಒಪಿ ಬೇರೆಯಾಗಲಿ. ಪಕ್ಷದಲ್ಲಿ ಹಲವು ಹಿರಿಯರಿದ್ದಾರೆ. ಅವರಿಗೂ ಅವಕಾಶ ಸಿಗಲಿ. ಎರಡನ್ನೂ ಬೇರೆ ಮಾಡಿದರೆ ತಪ್ಪೇನಿಲ್ಲ. ಅಧಿಕಾರ ಹಂಚಿಕೆಯಾಗಬೇಕು.

    | ಕೆ.ಎಚ್.ಮುನಿಯಪ್ಪ ಮಾಜಿ ಸಂಸದ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts