ಹಣಕೋಣ ಸಾತೇರಿ ದೇವಿ ಜಾತ್ರೆಗೆ ಚಾಲನೆ

ಕಾರವಾರ: ಹಣಕೋಣ ಸಾತೇರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಿದ್ದು, ಮಂಗಳವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೆ. 22 ರ ಸಂಜೆ 4 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಇರಲಿದೆ.

ಸೆ. 16 ರಾತ್ರಿ ಬಾಗಿಲು ತೆರೆದ ಸಾತೇರಿ ದೇವಸ್ಥಾನದಲ್ಲಿ 17 ರಂದು ಕುಳಾವಿಗಳು (ಸ್ಥಳೀಯ ಪ್ರಮುಖರು) ಪೂಜೆ ಸಲ್ಲಿಸಿದರು. ಸಿಂಗಾರ ಅರ್ಪಿಸಿದರು.

ಮೊದಲ ದಿನ ಸಾವಿರಾರು ಜನರು ದೇವಿಯ ದರ್ಶನ ಪಡೆದರು. ಸರದಿಯಲ್ಲಿ ನಿಂತು ಹಣ್ಣು, ಕಾಯಿ ಮಾಡಿಸಿದರು. ಉಡಿ ಅರ್ಪಿಸಿದರು. ಸೆ. 19 ರಿಂದ 21 ರವರೆಗೆ ಮಧ್ಯಾಹ್ನದ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ವರ್ಷದಲ್ಲಿ ಏಳು ದಿನ ಮಾತ್ರ ತೆರೆದಿರುವ ಸಾತೇರಿ ದೇವಿ ದರ್ಶನಕ್ಕೆ ಕೇವಲ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲ ಗೋವಾ ಹಾಗೂ ಮಹಾರಾಷ್ಟ್ರಗಳಿಂದಲೂ ಭಕ್ತರು ಬರುವುದು ವಿಶೇಷ.