More

    ಒಂಟೆಯ ಸೊಂಟ ಮುರಿದ ಹುಲ್ಲು

    ಒಂಟೆಯ ಸೊಂಟ ಮುರಿದ ಹುಲ್ಲುನಾನು ಹತ್ತು ವರ್ಷದವನಿದ್ದಾಗ ನಮ್ಮಪ್ಪ ‘ಭಯಂಕರ ಕೊಲೆ’ ಎಂಬ ಪತ್ತೆದಾರಿ ಕಾದಂಬರಿಯನ್ನು ಅರ್ಧ ಓದಿ ಹೇಳಿ ಒಂದು ಕುತೂಹಲಕಾರಿ ಘಟ್ಟದಲ್ಲಿ ‘ಇನ್ನು ಬೇಕಾದ್ರೆ ನೀನೇ ಓದಿಕೋ…’ ಅಂತ ನಿಲ್ಸಿದ್ರು. ನಾನು ಎಷ್ಟೇ ಹಟ ಮಾಡಿದ್ರೂ ಅವ್ರು ಜಗ್ಗಲಿಲ್ಲ. ಓದೋದಕ್ಕೆ ಪ್ರಯತ್ನಿಸಿದೆ. ಸರಾಗವಾಗಿ ಓದಿಸಿಕೊಂಡು ಹೋಯ್ತು. ಅಲ್ಲಿಂದ ಓದೋ ಗೀಳಿಗೆ ಬಿದ್ದು ಭಯಂಕರ ಓದುಗನಾದೆ. ಪ್ರಸಿದ್ಧ ಲೇಖಕರಾದ ಎಸ್.ಎಲ್.ಭೈರಪ್ಪ, ಅನಕೃ, ಬೀಚಿ, ಕಾರಂತ ಮೊದಲಾದವರ ಪುಸ್ತಕಗಳನ್ನು ಓದಿದ ಮೇಲೆ ಇಂಗ್ಲಿಷ್ ಲೇಖಕರಾದ ಜೆಫ್ರಿ ಆರ್ಚರ್, ಸಿಡ್ನಿ ಷೆಲ್ಡೋನ್, ಪೆರ್ರಿ ಮೆಸನ್ ಲಡ್ ಲೂಮ್ ಮುಂತಾದವರ ಫಿಕ್ಷನ್​ಗಳನ್ನು ಓದಿ ಮುಗಿಸಿದೆ. ರವಿ ಬೆಳಗೆರೆಯವರ ‘ಬಾಟಮ್ ಐಟಂ’ ಓದಿದಾಗ ನನಗೂ ಬರೀಬೇಕು ಅಂತ ಅನ್ಸೋಕೆ ಶುರುವಾಯ್ತು. ನಿಮಗೂ ಬರೀತೀನಿ ಅಂತ ಅನ್ಸಿದ್ರೆ ಬರೀರಿ. ಯಾಕೆಂದ್ರೆ ಪ್ರತಿಯೊಂದು ಬರಹ ಕೂಡ ಲೇಖಕನ ಅನುಭವದ ಮೂಟೆಯಾಗಿರುತ್ತದೆ. ನಿಮ್ಮ ಬರಹ ಒಬ್ಬ ಓದುಗನ ಮೇಲೆ ಪರಿಣಾಮ ಬೀರಿದ್ರೂ ನಿಮ್ಮ ಪ್ರಯತ್ನ ಸಾರ್ಥಕ.

    ಯಾವುದೇ ವಿಷಯವನ್ನು ಬರೆಯಬೇಕಾದರೆ ಪೂರ್ವತಯಾರಿ ಮಾಡಿಕೊಳ್ಳಿ. ಏನನ್ನು ಬರೀಬಹುದು, ಏನನ್ನು ಬರೆದ್ರೆ ಪ್ರಮಾದವಾಗಬಹುದು ಇತ್ಯಾದಿ. ವಿಷಯಗಳಿಗೆ ಏನೂ ಕೊರತೆ ಇಲ್ಲ. ಯಾರದಾದ್ರು ಕಥೆ ಓದುವಾಗ ನೀವಾದ್ರೆ ಅದರ ಕೊನೆಯನ್ನು ಹೇಗೆ ಮಾಡ್ತಿದ್ರಿ ಅಂತ ಯೋಚಿಸಿ. ಕಥೆ ಬೇರೆ ರೀತಿಯಲ್ಲಿ ಅಂತ್ಯಗೊಂಡರೆ, ಅದೇ ಕಥೆಯನ್ನು ಅಲ್ಲಲ್ಲಿ ಮಾರ್ಪಾಡುಗಳನ್ನು ಮಾಡಿ ನೀವು ಊಹಿಸಿದ ರೀತಿಯಲ್ಲಿ ಹೆಣೆಯಿರಿ. ನನ್ನ ಬರಹಗಳನ್ನು ನನ್ನ ಅನುಭವಗಳ ಲೇಪನದೊಂದಿಗೆ ಬರೆಯುತ್ತೇನೆ. ಇದರಲ್ಲಿ ಹಿರಿಯರು ಹೇಳುತ್ತಿದ್ದ ಅನುಭವಗಳ, ಕಥೆಗಳ ಪ್ರಭಾವ ತುಂಬ ಇದೆ.

    ಒಂಟೆಯ ಸೊಂಟವನ್ನು ಯಕಶ್ಚಿತ್ ಹುಲ್ಲು ಹೇಗೆ ಮುರಿಯಿತು ಅನ್ನೋದು ನಿಮಗೆ ಆಶ್ಚರ್ಯವಾಗಬಹುದು. “The last straw that broke the camel’s back” ಅಂತ ಒಂದು ಗಾದೆಮಾತಿದೆ. ಅದರ ಅರ್ಥ ಒಬ್ಬಾತ ತನ್ನ ಮನೆಯನ್ನು ಶಿಫ್ಟ್ ಮಾಡುವಾಗ ತನ್ನ ಒಂಟೆಯ ಬೆನ್ನ ಮೇಲೆ ಸಾಮಾನು ಹೇರುತ್ತಿದ್ದನಂತೆ. ಮೊದಲು ಮಂಚ, ಹಾಸಿಗೆ ಇಟ್ಟ. ನಂತರ ಕುರ್ಚಿ, ಸ್ಟೂಲು ಇಟ್ಟ. ಸಾಲದ್ದಕ್ಕೆ ರುಬ್ಬುವ ಕಲ್ಲು, ತಕ್ಕಡಿ, ತೂಕದ ಕಲ್ಲುಗಳನ್ನು ಇಟ್ಟ. ಕೆಳಗೆ ಬಗ್ಗಿ ಒಂಟೆಯ ಸೊಂಟ ಗಟ್ಟಿಯಾಗಿದೆ ಅನ್ನೋದನ್ನು ಖಚಿತಮಾಡಿಕೊಂಡ. ಸರಿ, ಉಳಿದಿದ್ದ ಎಲ್ಲ ಸಾಮಾನುಗಳನ್ನು ಒಂದೂ ಬಿಡದಂತೆ ಹೇರಿದ. ಒಂಟೆಯ ಸೊಂಟ ಸ್ವಲ್ಪವೂ ಸೊಟ್ಟಗಾಗಿಲ್ಲ ಅಂತಂದುಕೊಳ್ಳುವಷ್ಟರಲ್ಲಿ ಒಂದು ಹುಲ್ಲಿನ ಪಿಂಡಿ ಕಾಣಿಸಿತು. ಯಾವಾಗ ಅದನ್ನು ಹೇರಿದನೋ ತಕ್ಷಣ ಒಂಟೆ ಸೊಂಟ ಮುರಿದಿತ್ತು. ಇದರಿಂದ ಆತ ಒಂದು ತೀರ್ವನಕ್ಕೆ ಬಂದ, ಏನೆಂದರೆ ಒಂಟೆಯ ಮೇಲೆ ಏನನ್ನಾದರೂ ಹೇರಬಹುದು, ಆದರೆ ಹುಲ್ಲನ್ನು ಹೇರಿದರೆ ಮಾತ್ರ ಅದರ ಬೆನ್ನು ಮುರಿಯುತ್ತದೆ.

    ಇದನ್ನು ಇಲ್ಲಿ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ಗಂಡ ಲೇಟಾಗಿ ಮನೆಗೆ ಬರ್ತಾನೆ ಅಂತ ಡೈವೋರ್ಸ್ ಕೊಡೋ ಹೆಂಡ್ತಿ, ಆಕೆ ಸಾರಿಗೆ ಉಪ್ಪು ಜಾಸ್ತಿ ಹಾಕಿದ್ಲು ಅಂತ ಹೊಡ್ದು ಡೈವೋರ್ಸ್ ಕೊಡೋ ಗಂಡ, ತನ್ನ ಬಿಸಿನೆಸ್ ಪಾರ್ಟನರ್ ಇಪ್ಪತ್ತು ರೂಪಾಯಿ ವಸ್ತುವಿಗೆ ಎಪ್ಪತ್ತು ರೂಪಾಯಿ ಕೊಟ್ಟ ಅನ್ನೋದಕ್ಕೆ ಆತನ ವ್ಯವಹಾರವನ್ನೇ ಬಿಡೋ ವ್ಯಕ್ತಿ- ಹೀಗೆ ಸಣ್ಣ-ಸಣ್ಣ ಕಾರಣಗಳಿಗಾಗಿ ಸಂಬಂಧಗಳು ಮುರಿದು ಬೀಳೋದನ್ನ ಕೇಳಿರಬಹುದು. ಇದಕ್ಕೆಲ್ಲ ಕಾರಣ ಏನಂದ್ರೆ ಅದು ಆಗ ತಾನೇ ಉಂಟಾದ ಸಿಟ್ಟಲ್ಲ, ಬದಲಾಗಿ ಹಿಂದಿನ ಅನೇಕ ವರ್ಷಗಳಿಂದ ನಡೀತಿದ್ದ ಘಟನೆಗಳ ಒಟ್ಟು ಸಿಟ್ಟಿನ ಬಾಂಬ್ ಅಂದು ಸ್ಪೋಟಿಸಿರುತ್ತೆ. ಗಂಡ ಎಲ್ಲೆಲ್ಲೋ, ಯಾರ್ಯಾರ ಜತೆಗೋ ಹೋಗಿ ತಡವಾಗಿ ಬರ್ತಿದ್ದ, ಆಫೀಸಿಗೆ ರಜೆ ಹಾಕಿ ಲವರ್ ಜತೆ ರೆಸಾರ್ಟ್​ಗೆ ಹೋಗ್ತಿದ್ದ. ಆದರೆ ಅದನ್ನು ಸಾಬೀತು ಮಾಡಲಾಗದೇ ಒದ್ದಾಡುತ್ತಿದ್ದ ಹೆಂಡ್ತಿ, ಮನೆನಾಯಿಗೆ ಇರೋ ಮರ್ಯಾದೆ ತನಗೆ ಸಿಕ್ತಿಲ್ಲ, ತನ್ನ ಬಗ್ಗೆ ಯಾವುದೇ ಕಾಳಜಿ ವಹಿಸ್ತಿಲ್ಲ, ಮನೇಲಿದ್ದ ದುಡ್ಡನ್ನೆಲ್ಲ ತವರಿಗೆ ಕೊಟ್ಟು ಮನೆ ಖಾಲಿ ಮಾಡ್ತಾಳೆ ಅಂತ ಸದಾ ಒದ್ದಾಡೋ ಗಂಡ- ಈ ಕಾರಣಗಳೇ ಸಾಕಾಗುತ್ತೆ ಸಂಸಾರ ಸರ್ವನಾಶವಾಗಲು. ಇಬ್ಬರಿಗೂ ಅವರವರ ತಪ್ಪು ಕಾಣಿಸದಿರಬಹುದು ಅಥವಾ ‘ನಾನು ಇರೋದೇ ಹೀಗೆ, ಬೇಕಾದ್ರೆ ಎಡ್ಜಸ್ಟ್ ಮಾಡ್ಕೊಂಡು ಬಿದ್ದಿರು’ ಅನ್ನೋ ಧಿಮಾಕನ್ನು ಕೆಲ ಸಮಯದವರೆಗೆ ಇಬ್ಬರೂ ಸಹಿಸಿಕೊಂಡಾರು. ಆದರೆ ಅದಾವುದೋ ಒಂದು ಅನುಚಿತ ಘಟನೆ ಮರುಕಳಿಸಿದಾಗ ಇಬ್ಬರ ಸಹನೆಯ ಕಟ್ಟೆ ಒಡೆಯೋದು ಖಚಿತ. ಆದ್ದರಿಂದ ಸಂಸಾರದಲ್ಲಿ ಸಂಶಯಗಳೇ ಬಾರದ ರೀತಿಯಲ್ಲಿ ಇದ್ದು ಬಿಡಬೇಕು. ಒಬ್ಬರ ಮೇಲೊಬ್ಬರು ಸಂಶಯ ಪಟ್ಟರೆ ಮೊದಲು ಕಿಡಿಯಾಗಿದ್ದದ್ದು ಆಮೇಲೆ ಜ್ವಾಲಾಮುಖಿಯೇ ಆಗಬಹುದು. ಅಯ್ಯೋ, ಬರೀ ಲೇಟಾಗಿ ಬರೋದಕ್ಕೆ ಡೈವರ್ಸಾ? ಟೈಂಗೆ ಊಟ, ತಿಂಡಿ ಮಾಡಿ ಹಾಕ್ತಿರ್ಲಿಲ್ಲ ಅನ್ನೋದಕ್ಕೆ ಬೇರೆ ಮನೆ ಮಾಡೋದಾ? ಅನ್ನೋ ಅನುಕಂಪವನ್ನು ನಾವು ತೋರಿಸಬಹುದು ಅಥವಾ ಅವರಿಗೆ ಬೇರೆ ಬೇರೆಯಾಗಲು ಏನೋ ಒಂದು ನೆಪ ಬೇಕಾಗಿತ್ತು. ಸಿಕ್ಕಿದಾಗ ಬೇರೆ ಆದ್ರು ಅಂತ ಸಮಜಾಯಿಶಿ ನೀಡಬಹುದು. ಆದರೆ ಅದಕ್ಕೆಲ್ಲ ಅಸಲಿ ಕಾರಣ ಬೇರೇನೇ ಇರುತ್ತೆ. ಇದು ಸಂಸಾರದಲ್ಲಿ ನಡೆಯುವ ವಿಷಯ ಮಾತ್ರ ಅಲ್ಲ, ಸ್ನೇಹಿತರು, ಸಂಬಂಧಿಗಳು ಇವರೊಳಗೆ ನಡೆಯುವ ಮುಸುಕಿನ ಗುದ್ದಾಟಗಳು ಕೂಡ ಕೊನೆಗೊಮ್ಮೆ ಮುಖ ಮುಖ ನೋಡಲು ಹೇಸಿಗೆಯಾಗುವಷ್ಟು ಹಳಸಿ ಹೋಗಬಹುದು.

    ಆಸ್ತಿಸಂಬಂಧ ನಡೆದ ಹಳೆಯ ದ್ವೇಷಕ್ಕೆ ದೂರವಾದ ಅಣ್ಣ-ತಮ್ಮಂದಿರು, ಅಪ್ಪ ಸೈಕಲ್ ಕೊಡಿಸಿಲ್ಲ ಅಂತ ಮನೆ ಬಿಟ್ಟು ಹೋದ ಮಗ, ಯಾವಾಗ್ಲೂ ಮೊಬೈಲಲ್ಲೇ ಬಿದ್ದಿರ್ತೀಯಾ ಅಂತ ಅಮ್ಮ ಬೈದಳೆಂಬ ಒಂದೇ ಕಾರಣಕ್ಕೆ ನೇಣಿಗೆ ಕೊರಳೊಡ್ಡಿದ ಮಗಳು- ಇವರ ಬಗ್ಗೆ ಹೊರನೋಟಕರಿಗೆ ಕಾರಣ ಕ್ಷುಲ್ಲಕವಾಗಿರಬಹುದು. ಆದರೆ ಕೇಳಿದ್ದನ್ನು ಕೊಟ್ಟಿಲ್ಲದ ಅಮ್ಮ, ದಿನ ಬೆಳಗಾದರೆ, ‘ನೀನು ನಾಲಾಯಕ್ಕು, ದಂಡಪಿಂಡ ಹೀಗೆ ಆದ್ರೆ ಮನೆಯಿಂದ ಹೊರಗೆ ಹಾಕ್ತೀನಿ, ಆಸ್ತಿಯಲ್ಲಿ ಒಂದು ಕವಡೆ ಕೂಡ ಕೊಡೊಲ್ಲ’ ಅಂತ ಮೂದಲಿಸುವ ಅಪ್ಪ- ಇವರ ಈ ತೆರನಾದ ಆಗಾಗ್ಗೆ ಮರುಕಳಿಸುವ ವರ್ತನೆಗಳೇ ಮಕ್ಕಳಿಗೆ ಹೆತ್ತವರನ್ನು ದೂರ ಮಾಡಲು ಕಾರಣಗಳಾಗುತ್ತವೆ.

    ಏನೇ ಮಾಡಿದರೂ ಹೇಗೂ ಸಹಿಸಿಕೊಳ್ಳುತ್ತಾರೆ, ಬೇರೆ ಗತಿ ಇಲ್ಲ ಎಂದು ಬೇಜವಾಬ್ದಾರಿತನದಿಂದ ಯಾರ ಮೇಲೂ ಒತ್ತಡ ಹೇರುತ್ತ ಹೋಗಬೇಡಿ. ಕೊನೆಗೊಮ್ಮೆ ಸಂಬಂಧ ಕೆಡುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಒಂಟೆಯ ಸೊಂಟ ಮುರಿಯದ ಹಾಗೆ ನೋಡಿಕೊಳ್ಳಿ.

    ಜೋಕು: ಒಬ್ಬ ಜಿರಳೆಯ ಒಂದು ಕಾಲು ಮುರಿದ. ಆದರೂ ಅದು ನಡೀತಿತ್ತು. ಎರಡನೇ, ಮೂರನೇ, ನಾಲ್ಕನೇ, ಐದನೇ ಕಾಲು ಮುರಿದ್ರೂ ತೆವಳ್ತಾ ಮುಂದೆ ಹೋಗ್ತಿತ್ತು. ಆದ್ರೆ ಆರನೇ ಕಾಲು ಮುರಿದಾಗ ಮಾತ್ರ ಅದು ಅಲ್ಲಾಡಲಿಲ್ಲ. ಆಗ ಆತ ಜಿರಳೆಯ ಮುಂದುಗಡೆಯ ಬಲದ ಕಾಲು ಮುರಿದ್ರೆ ಅದಕ್ಕೆ ಓಡಾಡೋಕೆ ಆಗೋಲ್ಲ ಎಂಬ ತೀರ್ವನಕ್ಕೆ ಬಂದ.

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts