ಹಂಪಿ ಉತ್ಸವಕ್ಕೆ ಬರ ಸಿಂಗಾಪುರಕ್ಕೆ ಜೈಕಾರ

| ವಿಲಾಸ ಮೇಲಗಿರಿ ಬೆಂಗಳೂರು

ಭೀಕರ ಬರಗಾಲದಿಂದಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಒಂದೆಡೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲೂ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ ಮತ್ತೊಂದೆಡೆ ಸರ್ಕಾರಿ ವೆಚ್ಚದಲ್ಲಿ 60 ಅಧಿಕಾರಿಗಳ ಸಿಂಗಾಪುರ ಪ್ರವಾಸಕ್ಕೆ ಹಸಿರು ನಿಶಾನೆ ತೋರಿದೆ.

49 ಸಾವಿರ ಕೋಟಿ ರೂ. ಸಾಲಮನ್ನಾ ಸವಾಲಿನ ನಡುವೆಯೇ ರಾಜ್ಯವನ್ನು ಕಂಗೆಡಿಸಿರುವ ಬರಕ್ಕೆ ನೆರವು ನೀಡುವಂತೆ ಕೇಂದ್ರದ ಎದುರು ಕೈಚಾಚಿರುವ ಸರ್ಕಾರ ಇಂತಹ ಸಂಕಷ್ಟದ ಸಮಯದಲ್ಲೂ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಒಟ್ಟು 60 ಅಧಿಕಾರಿಗಳು ಒಂದು ವಾರದ ತರಬೇತಿಗಾಗಿ ಸಿಂಗಪುರಕ್ಕೆ ಹೊರಡಲು ಸಿದ್ಧರಾಗುತ್ತಿದ್ದಾರೆ. ಈ ಪೈಕಿ 30 ಅಧಿಕಾರಿಗಳ ಪಟ್ಟಿಗೆ ಈಗಾಗಲೇ ಮುಖ್ಯಮಂತ್ರಿಗಳು ಸೈ ಎಂದಿದ್ದು, 2ನೇ ಪಟ್ಟಿ ಅನುಮೋದನೆಗೂ ತಯಾರಿ ನಡೆದಿದೆ.

ಅಧ್ಯಯನ ಪ್ರವಾಸದ ನೆಪದಲ್ಲಿ ಅಧಿಕಾರಿಗಳು ವಿದೇಶ ಪ್ರವಾಸ ಕೈಗೊಳ್ಳುವುದಕ್ಕೆ ಈ ಹಿಂದೆಯೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿ ಸರ್ಕಾರ ಪ್ರವಾಸ ರದ್ದುಗೊಳಿಸಿದ ಅನೇಕ ಉದಾಹರಣೆಗಳು ಕಣ್ಣ ಮುಂದಿವೆ. ಆದರೆ ಈ ಬಾರಿ ಅಧಿಕಾರಿಗಳು ‘ಅಧ್ಯಯನ ಪ್ರವಾಸ’ ಎಂದರೆ ವಿಘ್ನ ಎದುರಾಗಬಹುದೆಂಬ ಕಾರಣಕ್ಕಾಗಿ ‘ತರಬೇತಿ’ ಹೆಸರಿನಲ್ಲಿ ವಿಮಾನ ಏರಲು ಅಣಿಯಾಗಿದ್ದಾರೆ.

ಹಲವರ ನಿರಾಸಕ್ತಿ: ಇನ್ನೂ ಕೆಲವು ಇಲಾಖೆಗಳ ಕಾರ್ಯದರ್ಶಿಗಳಿಗೆ ಮೂರುಬಾರಿ ಪತ್ರ ಬರೆದರೂ ವಿದೇಶ ಪ್ರವಾಸಕ್ಕೆ ಆಸಕ್ತಿ ತೋರಿಸಿಲ್ಲ. ಇಲಾಖಾ ವಿಚಾರಣೆ/ನ್ಯಾಯಾಂಗ ವಿಚಾರಣೆ/ಕ್ರಿಮಿನಲ್ ಮೊಕದ್ದಮೆ ಬಾಕಿ ಇದ್ದವರನ್ನು ವಿದೇಶ ಪ್ರವಾಸ ಕಳುಹಿಸುವಂತಿಲ್ಲ ಎಂಬ ಕಾರಣದಿಂದಲೂ ಈ ಇಲಾಖೆಗಳು ಹಿಂದೇಟು ಹಾಕಿರುವ ಸಾಧ್ಯತೆಗಳಿವೆ. ಬರದ ಸಂದರ್ಭದಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಇಂತಹ ಸನ್ನಿವೇಶದಲ್ಲಿ ಉನ್ನತ ಅಧಿಕಾರಿಗಳನ್ನು ತರಬೇತಿ/ವಿದೇಶ ಪ್ರವಾಸಕ್ಕೆ ಕಳುಹಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಜತೆಗೆ, ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಿಂಗಾಪುರದ ಬದಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ಮಾತೂ ಕೇಳಿಬರುತ್ತಿದೆ.

ಪ್ರಸ್ತಾವನೆ ಶೇ.81 ಹೆಚ್ಚಳ

ಅಧಿಕಾರಿಗಳು ಸಿಂಗಾಪುರದಲ್ಲಿ ಸಾರ್ವಜನಿಕ ನೀತಿ ಮತ್ತು ವಿನ್ಯಾಸಗೊಳಿಸಲಾದ ಆಡಳಿತ ತರಬೇತಿ ಹೆಸರಿನಲ್ಲಿ ತರಬೇತಿ ಪಡೆಯಲಿದ್ದಾರೆ. ಈ ಮೊದಲು ದಕ್ಷಿಣ ಕೊರಿಯಾಗೆ ತೆರಳಲು ನಿರ್ಧರಿಸಲಾಗಿತ್ತು. ಸಿಂಗಾಪುರದ ಕ್ರಿಸ್ಮಸ್ ಮೋಡಿಯೋ ಏನೋ ಇದ್ದಕ್ಕಿದ್ದಂತೆ ತಾಣ ಬದಲಾಯಿತು. ಪ್ರವಾಸ ಸಿಂಗಾಪುರವೆಂದಾದಾಗ ತರಬೇತಿ ವೆಚ್ಚ ಪ್ರಸ್ತಾವನೆಯ ಮೂಲದರಕ್ಕಿಂತ ಶೇ.81.06ಕ್ಕೆ ಹೆಚ್ಚಿದೆ! ಇನ್ಸ್​ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ಈ ತರಬೇತಿಯ ಹೊಣೆ ಹೊತ್ತಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ರವೀಂದ್ರ ಇದರ ನೇತೃತ್ವ ವಹಿಸಿಕೊಂಡಿದ್ದಾರೆ.

ಅವರೇ ಇಲ್ಲಿಗೆ ಬರಲಿ

ಸಿಂಗಾಪುರದಲ್ಲಿ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳನ್ನೇ ಇಲ್ಲಿಗೆ ಕರೆಸಿಕೊಂಡು ತರಬೇತಿ ಕೊಡಿಸಿದರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂಬ ಮಾತು ವಿಧಾನಸೌಧ ಕಾರಿಡಾರ್​ನಲ್ಲಿಯೇ ಕೇಳಿಬರುತ್ತಿದೆ.

ಕೌಶಲ ಅಭಿವೃದ್ಧಿಗಾಗಿ ಕ್ಲಾಸ್ 1 ಶ್ರೇಣಿಯ ಅಧಿಕಾರಿಗಳಿಗೆ ಐಸೆಕ್ ಮೂಲಕ ಮೂರು ವಾರ ತರಬೇತಿ ಕೊಡಿಸಲಾಗುತ್ತದೆ. ಅದರ ಭಾಗವಾಗಿ ಒಂದು ವಾರ ಸಿಂಗಾಪುರದಲ್ಲಿ ತರಬೇತಿ ನೀಡಲಾಗುತ್ತದೆ. ಜನವರಿ ಅಂತ್ಯಕ್ಕೆ 1 ಬ್ಯಾಚ್ ಸಿಂಗಾಪುರಕ್ಕೆ ತೆರಳಲಿದೆ. 2ನೇ ಬ್ಯಾಚ್ ಕೂಡ ಸಿದ್ಧವಾಗುತ್ತದೆ. ಆರು ತಿಂಗಳಿಗೆ ಒಂದು ಬ್ಯಾಚ್​ಗೆ ತರಬೇತಿ ನೀಡಲಾಗುತ್ತದೆ.

| ಅಂಜುಂ ಪರ್ವೆಜ್, ಪ್ರಧಾನ ಕಾರ್ಯದರ್ಶಿ, ಡಿಪಿಆರ್.

ರಾಜ್ಯ ಬರ ಎದುರಿಸುತ್ತಿರುವಾಗ ಹಿರಿಯ ಅಧಿಕಾರಿಗಳನ್ನು ತರಬೇತಿ ಹೆಸರಿನಲ್ಲಿ ಸಿಂಗಾಪುರಕ್ಕೆ ಕಳುಹಿಸಿದರೆ ಮೋಜು ಮಾಡಲು ಕಳುಹಿಸಿದ ಅಪವಾದ ಸರ್ಕಾರಕ್ಕೆ ಬರುತ್ತದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಹೇಳುವ ಸಿಎಂ ಈ ಪ್ರವಾಸದ ಔಚಿತ್ಯವನ್ನು ಅರಿಯಬೇಕು. ಬಿಜೆಪಿ ಈ ಕುರಿತು ಅಧಿವೇಶನದಲ್ಲಿ ರ್ಚಚಿಸಲಿದೆ.

| ಕೋಟ ಶ್ರೀನಿವಾಸ ಪೂಜಾರಿ ಮೇಲ್ಮನೆ ಪ್ರತಿಪಕ್ಷದ ನಾಯಕ

1.50 ಕೋಟಿ ರೂಪಾಯಿ ವೆಚ್ಚ

30 ಅಧಿಕಾರಿಗಳಿಗೆ ಒಂದು ವಾರದ ವಿದೇಶ ತರಬೇತಿಯೂ ಸೇರಿದಂತೆ ಒಂದು ತಿಂಗಳ ತರಬೇತಿಗೆ 1.50 ಕೋಟಿ ವೆಚ್ಚವಾಗಲಿದೆ. 2 ತಂಡಕ್ಕೆ ಸುಮಾರು 3 ಕೋಟಿ ರೂ. ಮತ್ತು ಟಿಎ/ಡಿಎ ಸೇರಿ ಇದಕ್ಕೆ ಅಂದಾಜು 4-5 ಕೋಟಿ ರೂ. ವ್ಯಯಿಸಲಾಗುತ್ತದೆ.

ಯಾರ್ಯಾರ ಪ್ರವಾಸ

# 10 ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆ

# 5 ಲೋಕೋಪಯೋಗಿ ಇಲಾಖೆ

# 3 ಆರೋಗ್ಯ ಇಲಾಖೆ ಅಧಿಕಾರಿಗಳು

# 3 ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್

# 4 ನಗರಾಭಿವೃದ್ಧಿ ಇಲಾಖೆ

# 3 ಶಿಕ್ಷಣ ಇಲಾಖೆಯ ಸಿಬ್ಬಂದಿ