ಶೋಭಾಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು

ಹಂಪಿ: ಹಂಪಿ ಉತ್ಸವದ ನಿಮಿತ್ತ ಶನಿವಾರ ಸಂಜೆ ನಡೆದ ಜಾನದ ಕಲಾ ತಂಡಗಳ ವೈಭವದ ಶೋಭಾಯಾತ್ರೆಯಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯ ಕಲಾವಿದರ ಜತೆ ಜಾನಪದ ವಾದ್ಯಗಳಿಗೆ ಕುಣಿದು ಕಪ್ಪಳಿಸಿದ್ದು ಜನಮನ ಸೂರೆಗೊಂಡಿತು. ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗ ಆರಂಭಗೊಂಡ ಕಲಾ ತಂಡಗಳ ಪ್ರದರ್ಶನದ ಮೆರವಣಿಗೆಯಲ್ಲಿ ನಂದಿಧ್ವಜ, ನಾದಸ್ವರ, ಹಲಗೆ, ಕಹಳೆ ವಾದನ, ತಾಷಾರಾಂ ಡೋಲ್, ಹಗಲುವೇಷ, ಪೂಜಾ, ಗೊರವರ ಕುಣಿತ, ಸೋಮನ ಕುಣಿತ, ಪಟಕುಣಿತ, ಕರಡಿ ಮಜಲು, ಕೀಲುಕುದುರೆ, ಕರಡಿ ಕುಣಿತ ನೋಡುಗರಿಗೆ ಮುದ ನೀಡಿದರೆ, ಬೆಂಗಳೂರಿನ ಹೊಸಕೋಟೆ ಶಿವಮ್ಮ ತಂಡದವರ ತಮಟೆ ವಾದನ ನೆರೆದಿದ್ದವರನ್ನೊಮ್ಮೆ ಹೆಜ್ಜೆ ಹಾಕುವಂತಿತ್ತು. ಪುರವಂತಿಕೆ, ಜಗ್ಗಲಿಗಿ, ವೀರಭದ್ರ ಕುಣಿತದಲ್ಲಿ ಸ್ಥಳೀಯ ಕಲಾವಿದರ ಜತೆ ವಿದೇಶಿಗರೂ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕಲಾ ವೈಭವದ ಮೆರವಣಿಗೆ ಎದುರು ಬಸವಣ್ಣ ಮಂಟಪದವರೆಗೆ ನಡೆದು ಸಂಪನ್ನಗೊಂಡಿತು.