
ಕವಿತೆಗಳು ಶೋಷಿತರ ಪರವಾಗಿರಲಿ – ಹಂಪಿ ಉತ್ಸವದಲ್ಲಿ ಡಾ. ವೆಂಕಟಗಿರಿ ದಳವಾಯಿ ಸಲಹೆ
ವಿಜಯವಾಣಿ ಸುದ್ದಿಜಾಲ ಹಂಪಿ ( ವಿರೂಪಾಕ್ಷ ದೇವಾಲಯ ವೇದಿಕೆ)
ಕವಿತೆ ಶೋಷಿತರ ನೋವು-ನಲಿವುಗಳ ಪರ ನಿಲ್ಲುವಂತಿರಬೇಕು. ಕವಿ ಅವರ ಧ್ವನಿಯಾಗಬೇಕು. ಇಂದಿನ ಕವಿಗಳು ಚಾರಿತ್ರಿಕವಾಗಿ ಶೋಷಿತರಿಗೆ ಉಂಟಾದ ಅನ್ಯಾಯ ಪ್ರಶ್ನಿಸಿ, ಕವಿತೆಗಳ ಮೂಲಕ ಈ ಅನ್ಯಾಯ ಸರಿ ಮಾಡುವ ಮಾರ್ಗಗಳನ್ನು ಹುಡುಕಬೇಕೆಂದು ಕವಿ ಹಾಗೂ ವಿಮರ್ಶಕ ಕನ್ನಡ ಹಂಪಿ ವಿಶ್ವವಿದ್ಯಾಲಯದ ಡಾ. ವೆಂಕಟಗಿರಿ ದಳವಾಯಿ ಯುವಕವಿಗಳಿಗೆ ಸಲಹೆ ನೀಡಿದರು.
ಹಂಪಿ ಉತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ 3ನೇ ದಿನದ ಯುವ ಕವಿಗೋಷ್ಠಿ ಕಾರ್ಯಕ್ರಮವನ್ನು ತಮ್ಮ ಸ್ವರಚಿತ ‘ಬುಡಕಟ್ಟು ಮಹಿಳೆ’ ಕಾವ್ಯ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಬಾಣಂತಿಯರ ಸಾವಿಗೆ ಮಿಡಿದ ಕವಿತೆ
ಕವಿಯ ವಿಚಾರಧಾರೆ ಎಂದಿಗೂ ಪೂರ್ಣಗೊಳ್ಳುವುದಿಲ್ಲ. ನಿತ್ಯವು ಹೊಸತನವನ್ನು ಕವಿ ಹುಡುಕುತ್ತಿರಬೇಕು. ಅಂತಃದೃಷ್ಠಿ ಕಾಪಾಡಿಕೊಳ್ಳಬೇಕು. ಇನ್ನೊಬ್ಬರನ್ನು ದೂರುವ ಮುನ್ನ ಮೊದಲು ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅಂದಾಗಲೇ ನಮ್ಮ ಕವಿತೆಗೆ ಸಾರ್ವತ್ರಿಕತೆ ದೊರಕಿ ಬಹಳ ದಿನ ಉಳಿಯುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ಮಾತನಾಡಿ, ಶ್ರೀಮಂತಿಕೆಯಲ್ಲಿ ಕವಿತೆ ಹುಟ್ಟುವುದಿಲ್ಲ. ಕಷ್ಟ ಇದ್ದಾಗ ಜನ್ಮತಾಳುತ್ತದೆ. ಯುವ ಕವಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ಸವದಲ್ಲಿ ಯುವ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಉತ್ಸವಕ್ಕೆ ಆಗಮಿಸಿದ ಲಕ್ಷಾಂತರ ಜನರನ್ನು ಚಿಂತನೆಗೆ ಹಚ್ಚುವ, ಅವರಲ್ಲಿ ಬದಲಾವಣೆ ತರುವ ಶಕ್ತಿ ಕವಿತೆಗಿದೆ. ಯುವ ಕವಿಗಳು ಈ ನಿಟ್ಟಿನಲ್ಲಿ ಕವಿತೆಗಳನ್ನು ರಚಿಸಬೇಕು ಎಂದು ಕಿವಿ ಮಾತು ಹೇಳಿದರು.
ಸಾಮಾಜಿಕ ಚಿಂತಕ ಮಧುರಚನ್ನಶಾಸ್ತ್ರಿ ಮಾತನಾಡಿ, ಹಂಪಿ ಉತ್ಸವದ ಕವಿಗೋಷ್ಠಿಗೆ ಹೆಸರು ಕೊಟ್ಟ ಎಲ್ಲಾ ಕವಿಗಳನ್ನು ಕವಿತೆ ವಾಚನಕ್ಕೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಸಾಹಿತ್ಯದಲ್ಲಿ ವಚನ ಸಾಹಿತ್ಯಕ್ಕೆ ದೊಡ್ಡ ಸ್ಥಾನ ಇದೆ. 12ನೇ ಶತಮಾನದಿಂದ ಶರಣರು ತಮ್ಮ ಕಾಯಕ ಹಾಗೂ ವಚನಗಳ ಮೂಲಕ ಜಗತ್ತಿಗೆ ಒಳ್ಳೆಯ ಸಂದೇಶ ನೀಡಿದರು. ಅಂದಿನ ವಚನಗಳು ಇಂದಿಗೂ ಬಹಳ ಪ್ರಸ್ತುತವೆಂದರು.
ಕವಿ ಡಾ.ಅಕ್ಕಿ ಬಸವೇಶ ಆಶಯ ನುಡಿಗಳನ್ನಾಡಿದರು. ಬಳ್ಳಾರಿ ವಿಶ್ವವಿದ್ಯಾಲಯದ ಡೀನ್ ಡಾ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಚಿಂತಕ ಬಾಣದ ಮುರಳೀಧರ, ಡಿಡಿಪಿಐಗಳಾದ ವೆಂಕಟೇಶ, ಡಾ.ದಯಾನಂದ ಕಿನ್ನಾಳ, ಕವಿ ಅಬ್ದುಲ್ ಹೈದರ್ ಇತರರಿದ್ದರು.