ಹಂಪಿಯಲ್ಲಿ ಪಾರಂಪರಿಕ ಊಟದ ‘ಸವಿರುಚಿ’

ಸ್ತ್ರೀಶಕ್ತಿ ಸಂಘಟನೆಗೆ ಬಲ ತುಂಬಿದ ಯೋಜನೆ>

ಬಳ್ಳಾರಿ: ಹಂಪಿಯಲ್ಲಿ ಶೀಘ್ರದಲ್ಲೇ ವಿಜಯನಗರ ಪರಂಪರೆಯ ಸ್ಮರಣೆಯೊಂದಿಗೆ ಪಾರಂಪರಿಕ ಊಟವನ್ನೂ ಸವಿಯಬಹುದಾಗಿದೆ. ಶ್ರೀ ದುರ್ಗಾಂಬಿಕ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಇಂದಿರಾ ಸವಿರುಚಿ ಕೈ ತುತ್ತು ಯೋಜನೆ ಮೂಲಕ ಪ್ರವಾಸಿಗರಿಗೆ ಪಾರಂಪರಿಕ ಊಟ ಬಡಿಸಲು ಮುಂದಾಗಿದೆ.

ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಂದಿರಾ ಸವಿರುಚಿ ಕೈತುತ್ತು ಯೋಜನೆ ಜಾರಿಗೊಳಿಸಿದ್ದರು. ಜಿಲ್ಲೆಯಲ್ಲಿ 2018ರ ಮಾ 24ರಂದು ಯೋಜನೆಗೆ ಚಾಲನೆ ನೀಡಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಕ್ಯಾಂಟೀನ್ ಆರಂಭಿಸುವ ಉದ್ದೇಶ ಹೊಂದಲಾಗಿದ್ದರೂ ಯಾವುದೇ ಸ್ತ್ರೀಶಕ್ತಿ ಒಕ್ಕೂಟಗಳು ಮುಂದೆ ಬರದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಆರಂಭಿಸಲಾಗಿದೆ.

ಕಮಲಾಪುರದಲ್ಲಿ ಮಾಲ್ಯವಂತ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಇಂದಿರಾ ಸವಿರುಚಿ ಸಂಚಾರಿ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ವಗ್ಗರಣೆ ಮಿರ್ಚಿ, ಉಪ್ಪಿಟ್ಟು, ಪಲಾವ್, ದೋಸೆ ಸೇರಿದಂತೆ ಸ್ಥಳೀಯ ಖಾದ್ಯಗಳೇ ಸವಿರುಚಿ ಕ್ಯಾಂಟೀನ್ ವಿಶೇಷತೆಗಳಾಗಿವೆ. ಹಂಪಿಯ ಕಮಲ್ ಮಹಲ್ ಬಳಿ ಕ್ಯಾಂಟೀನ್ ಸ್ಥಳಾಂತರಕ್ಕೆ ಉದ್ದೇಶಿಸಲಾಗಿದೆ. ಈ ಕುರಿತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಅನುಮತಿ ಕೋರಲಾಗಿದೆ.

ಆರಂಭಿಕ ಹಂತದಲ್ಲಿ ಕಡಿಮೆ ವ್ಯವಹಾರ ನಡೆಯುತ್ತಿದ್ದರೂ ಇದೀಗ ನಿತ್ಯ 3ರಿಂದ 4 ಸಾವಿರ ರೂ. ವಹಿವಾಟು ಹೆಚ್ಚಳವಾಗಿದೆ. ಕ್ಯಾಂಟೀನ್ ಕಮಲ್ ಮಹಲ್ ಬಳಿ ಸ್ಥಳಾಂತರಗೊಂಡ ಬಳಿಕ ಪಾರಂಪರಿಕ ಊಟ ಉಣಬಡಿಸಲು ತೀರ್ಮಾನಿಸಲಾಗಿದೆ. ಊಟ, ತಿಂಡಿಯ ದರವನ್ನು ಸ್ತ್ರೀಶಕ್ತಿ ಸಂಘಗಳೇ ನಿರ್ಧರಿಸುತ್ತವೆ. ಆರಂಭಿಕ ಹಂತದಲ್ಲಿ ಕಡಿಮೆ ದರವನ್ನೂ ನಿಗದಿಪಡಿಸಲಾಗಿತ್ತು.

ಒಕ್ಕೂಟಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ 10 ಲಕ್ಷ ರೂ ಸಾಲ ರೂ. ಬಡ್ಡಿರಹಿತ ಸಾಲ ನೀಡಲಾಗಿದೆ. ಪ್ರತಿ ತಿಂಗಳು 15 ಸಾವಿರ ರೂ.ಯನ್ನು ಸಾಲದ ಮೊತ್ತಕ್ಕೆ ಪಾವತಿಸಬೇಕಿದೆ. ವಹಿವಾಟು ಅಭಿವೃದ್ಧಿಗಾಗಿ ಒಕ್ಕೂಟಕ್ಕೆ ಆರು ತಿಂಗಳು ಕಾಲಾವಕಾಶ ನೀಡಿ ಆ ಬಳಿಕ ಸಾಲದ ಮೊತ್ತ ಪಾವತಿಗೆ ಸೂಚಿಸಲಾಗಿತ್ತು. ಈ ಪ್ರಕಾರ ಕಳೆದ ಮೂರು ತಿಂಗಳಿಂದ ಒಕ್ಕೂಟದಿಂದ ಪ್ರತಿ ತಿಂಗಳು ನಿಗದಿತ ದಿನದೊಳಗೆ ತಲಾ 15 ಸಾವಿರ ರೂ. ಪಾವತಿಸಲಾಗುತ್ತಿದೆ.

ಸವಿರುಚಿ ಕ್ಯಾಂಟೀನ್ ಮೂಲಕ ನಾಲ್ಕು ಜನ ನೇರವಾಗಿ ಉದ್ಯೋಗ ಸೌಲಭ್ಯ ಪಡೆದಿದ್ದಾರೆ. ರೊಟ್ಟಿ ತಯಾರಿಸುವ ಮಹಿಳೆಯರಿಗೂ ಸಚಿರುಚಿ ಕ್ಯಾಂಟೀನ್ ಉದ್ಯೋಗಾವಕಾಶ ನೀಡಿದೆ. ಎಲ್ಲ ಖರ್ಚುಗಳನ್ನು ತೆಗೆದು ನೌಕರರಿಗೆ ಹಣ ಹಂಚಿಕೆ ಮಾಡಲಾಗುತ್ತದೆ. ಲಾಭಾಂಶದಲ್ಲಿ ಒಕ್ಕೂಟದ ಅಭಿವೃದ್ಧಿಗೂ ಶೇ. 25ರಷ್ಟು ಮೊತ್ತ ಮೀಸಲಿಡಲಾಗುತ್ತಿದೆ.