ಹೊಸಪೇಟೆ: ನಗರ ಸೇರಿದಂತೆ ತಾಲೂಕಿನಲ್ಲಿ ಸುರಿದ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಹಂಪಿಯ ವಿಜಯವಿಠಲ ದೇಗುಲಕ್ಕೆ ಹೋಗುವ ರಸ್ತೆ ಗುರುವಾರ ಸಂಜೆ ವರೆಗೆ ಬಂದ್ ಆಗಿತ್ತು.
ಬುಧವಾರ ಹಾಗೂ ಗುರುವಾರ ಸುರಿದ ಮಳೆಯಿಂದ ವಿಜಯನಗರ ಅರಸರ ಕಾಲದ ತುರ್ತು ಕಾಲುವೆ ತುಂಬಿ ರಸ್ತೆ ಮೇಲೆ ಹರಿಯಿತು. ಕಮಲಾಪುರದಿಂದ ವಿಜಯ ವಿಠಲ ದೇಗುಲಕ್ಕೆ ಹೋಗುವ ತಳವಾರಘಟ್ಟ ರಸ್ತೆಯಲ್ಲಿ ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯಿತು. ಇದರಿಂದಾಗಿ ತಳವಾರಘಟ್ಟ ಮಹಾದ್ವಾರದಿಂದ ಗೆಜ್ಜಲ ಮಂಟಪ ಹೋಗಲು ಪ್ರವಾಸಿಗರು ಪರದಾಡಿದರು. ರಸ್ತೆಗೆ ಭಾರಿ ಪ್ರಮಾಣದ ಮಳೆ ನೀರು ಬಂದ ಹಿನ್ನೆಲೆಯಲ್ಲಿ ತಾಲೂಕಿನ ವೆಂಕಟಾಪುರ ಮಾರ್ಗವಾಗಿ ಅಂದಾಜು ಐದಾರು ಕಿಮೀ ಸುತ್ತುಬಳಸಿ ವಿಜಯ ವಿಠ್ಠಲ ದೇಗುಲದ ಪಾರ್ಕಿಂಗ್ ಸ್ಥಳ ತಲುಪಬೇಕಾದ ಸ್ಥಿತಿ ಎದುರಾಯಿತು. ಸಂಜೆ ನೀರು ಕಡಿಮೆಯಾದ ನಂತರ ವಾಹನಗಳು ಸಂಚರಿಸಿದವು.