ಹಂಪಿ ಸ್ಮಾರಕಗಳ ಹಾನಿಗೆ ತೀವ್ರ ಆಕ್ರೋಶ

ತಾಲೂಕು ಸಮಾನ ಮನಸ್ಕರ ವೇದಿಕೆಯಿಂದ ಸಂಚಾರ ತಡೆ ಅಧಿಕಾರಿಗೆ ಮನವಿ ಸಲ್ಲಿಕೆ

ಹೊಸಪೇಟೆ: ಐತಿಹಾಸಿಕ ಹಂಪಿ ಸ್ಮಾರಕಗಳ ಹಾನಿ ಖಂಡಿಸಿ ತಾಲೂಕು ಸಮಾನ ಮನಸ್ಕರ ವೇದಿಕೆ ಕಾರ್ಯಕರ್ತರು ಕಮಲಾಪುರದಲ್ಲಿ ಶನಿವಾರ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಹಂಪಿ ಉಳಿಸಿ ಎಂದು ಘೋಷಣೆ ಕೂಗಿದರು.

ವಿಶ್ವ ಪ್ರಸಿದ್ದ ಹಂಪಿಯ ಸ್ಮಾರಕಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಸ್ಮಾರಕಗಳ ರಕ್ಷಣೆ, ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆಗೊಳಿಸುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷೃದಿಂದ ಹಂಪಿ ಅಭಿವೃದ್ಧಿ ಕಂಡಿಲ್ಲ. ಸ್ಮಾರಕಗಳಿಗೆ ಪದೇ ಪದೆ ಹಾನಿಯಾಗುತ್ತಿದೆ. ಕೂಡಲೆ ಸ್ಮಾರಕಗಳ ಸುತ್ತ ಭದ್ರತೆ ಹೆಚ್ಚಿಸಬೇಕು. ಕರ್ತವ್ಯ ಲೋಪದ ಮೇಲೆ ಭಾರತೀಯ ಸರ್ವೇಕ್ಷಣಾ, ಪುರಾತತ್ವ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ವಜಾಗೊಳಿಸಬೇಕು. ವಿಷ್ಣು ದೇವಾಲಯದ ಆವರಣದ ಕಂಬಗಳಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಭಾರತೀಯ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ರವೀಂದ್ರ ಮನವಿ ಸ್ವೀಕರಿಸಿ, ಈ ಘಟನೆಯಿಂದ ಇಲಾಖೆ ತಲೆ ತಗ್ಗಿಸುವಂತಾಗಿದೆ. ಕೂಡಲೆ ಕಿಡಿಗೇಡಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗುವುದು. ಸ್ಮಾರಕಗಳ ಸುತ್ತ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ತದ ನಂತರ ಮುಖಂಡರು ಸಂಚಾರ ತಡೆ ಕೈಬಿಟ್ಟರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಪೂಜಾರ್ ದುರ್ಗಪ್ಪ, ಮುಖಂಡರಾದ ನಿಂಬಗಲ್ ರಾಮಕೃಷ್ಣ, ದೇವಪ್ರಿಯ, ತಿಪ್ಪೇಸ್ವಾಮಿ, ಸೋಮಶೇಖರ್ ನಾಯಕ, ಎ.ಚಿದಾನಂದ, ಗುರು, ಹುಲುಗಪ್ಪ, ಸಂದೀಪ್ ಸಿಂಗ್, ಎನ್.ವೆಂಕಟೇಶ್, ಅಮಾಜಿ ಹೇಮಣ್ಣ, ಶಮೀವುಲ್ಲಾ, ಡಾ.ಬಿ.ಆರ್.ಮಳಲಿ, ಶಿವರಾಮ್, ಮಂಜುನಾಥ್, ವೆನ್ನಿಲಾ, ಗೀತಾ ಶಂಕರ್, ರಂಜನಿ, ರೂಪಾ, ರಾಧಾ ಇತರರಿದ್ದರು.