ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಮಹಾನವಮಿ ದಿಬ್ಬದ ಬಳಿಯ ಏಕಶಿಲೆಯ ಕಲ್ಲಿನ ಬಾಗಿಲ ಸಂರಕ್ಷಣೆಗೆ ಸುತ್ತಲೂ ಸರಪಳಿಯ ಬ್ಯಾರಿಕೇಡ್ ಅಳವಡಿಸಲಾಗಿದೆ.
ಹಂಪಿಗೆ ದಿನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ದೇಶ ವಿದೇಶ ಪ್ರವಾಸಿಗರು ಸಂರಕ್ಷಿತ ಸ್ಮಾರಕಗಳ ಬಳಿ ನಿಯಮ ಮೀರಿ ಅನೇಕರು ಸ್ಮಾರಕಗಳ ಮೇಲೆ ಕುಳಿತುಕೊಳ್ಳುತ್ತಿದ್ದರು. ಕೆಲವು ಅಶಿಸ್ತಿನ ಪ್ರವಾಸಿಗರಿಂದಾಗಿ ಹಾನಿಗಳು ಕೂಡ ಆಗಿತ್ತಿವೆ. ಫೋಟೋ ತೆಗೆಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಕ್ಕಿಳಿಯುತ್ತಿದ್ದಾರೆ. ಆದ್ದರಿಂದ ಕೆಲ ವರ್ಷಗಳ ಹಿಂದೆ ಕಲ್ಲಿನ ರಥಕ್ಕೆ ಸರಪಳಿ ಬ್ಯಾರಿಕೇಡ್ ನಂತರ ಮರದ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಅಪರೂಪರದ ಏಕಶಿಲೆಯ ಕಲ್ಲಿನ ಬಾಗಿಲು ಕೂಡ ಬಿರುಕು ಬಿಟ್ಟಿತ್ತು. ಮುಟ್ಟದಂತೆ ರಕ್ಷಣಾ ಸಿಬ್ಬಂದಿ ನೇಮಿಸಲಾಗಿತ್ತು. ಆದರೂ ಕೆಲ ಪ್ರವಾಸಿಗರು ಶೋಕಿಗಾಗಿ ಎಗ್ಗಿಲ್ಲದೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಆದ್ದರಿಂದ ಪುರಾತತ್ವ ಇಲಾಖೆ ಸಂರಕ್ಷಣೆಗೆ ಸುತ್ತಲೂ ಸರಪಳಿಯ ಬ್ಯಾರಿಕೇಡ್ ಅಳವಡಿಸಿ ಕಡಿವಾಣ ಹಾಕಿದೆ. ಸದ್ಯ ಕಲ್ಲಿನ ರಥಕ್ಕೆ ಮರದ ಕಟ್ಟಿಗೆಯಿಂದ ಹಾಗೂ ಕಲ್ಲಿನ ಏಕಶಿಲಾ ಬಾಗಿಲಿಗೆ ಸರಪಳಿ ಬ್ಯಾರಿಕೇಡ್ ಹಾಕಲಾಗಿದೆ.
ಹಂಪಿಯ ವಿಜಯ ವಿಠ್ಠಲ ದೇಗುಲದ ಸಂಗೀತ ಮಂಟಪದ ಆವರಣ, ಕಮಲ್ ಮಹಲ್ ಸೇರಿ ಕೆಲ ಸ್ಮಾರಕಗಳ ಮೇಲೆ ಹತ್ತದಂತೆ, ಮುಟ್ಟದಂತೆ ನಿಷೇಧಿಸಿ ಸೂಚನಾ ಫಲಕ ಅಳವಡಿಸಲಾಗಿದೆ. ಹೀಗಿದ್ದರೂ ಈ ಹಿಂದೆ ಹೈದರಾಬಾದ್ ಮೂಲಕ ವ್ಯಕ್ತಿಯೊಬ್ಬರು ಪ್ರೀವೆಡ್ಡಿಂಗ್ ಶೂಟಿಂಗ್ ನಡೆಸಿದ್ದು ಸುದ್ದಿಯಾಗಿತ್ತು. ಜತೆಗೆ ಪ್ರವಾಸಿಗರೂ ಕಲ್ಲಿನ ತೇರಿನ ಬಳಿ ಹಾಕಿದ್ದ ಬಿಳಿಪಟ್ಟಿ ದಾಟಿ ಎಗ್ಗಿಲ್ಲದೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಹೀಗಾಗಿ ಈಗ ಪುರಾತತ್ವ ಇಲಾಖೆ ಸುತ್ತ ಸರಪಳಿ ಬ್ಯಾರಿಕೇಡ್ ಹಾಕಿತ್ತು. ನಂತರ ಮರದ ಕಟ್ಟಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಸ್ಮಾರಕಗಳಿಗೂ ರಕ್ಷಣಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದೆ.