ಟಿಪ್ಪು ಜಯಂತಿ ಮಾಡಲು ಹಣ ಇದೆ, ಹಂಪಿ ಉತ್ಸವ ಮಾಡಲು ಇಲ್ಲ: ಶೋಭಾ ಕರಂದ್ಲಾಜೆ

ಮಂಗಳೂರು: ಟಿಪ್ಪು ಜಯಂತಿ ಮಾಡುವುದಕ್ಕೆ ಸರ್ಕಾರದ ಬಳಿ ಹಣ ಇದೆ. ಆದರೆ ಹಂಪಿ ಉತ್ಸವ ಮಾಡುವುದಕ್ಕೆ ಹಣ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿ, ಹಂಪಿ ಉತ್ಸವ ಇಡೀ ರಾಜ್ಯದಲ್ಲಿ ನಡೆಯುದಿಲ್ಲ. ಹಂಪಿಯಲ್ಲಿ ಮಾತ್ರ ನಡೆಯುತ್ತದೆ. ಇದಕ್ಕೆ ಸರ್ಕಾರ ಬರಗಾಲದ ಕಾರಣ ನೀಡಿದೆ. ಹಂಪಿ ಉತ್ಸವದಿಂದ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಆದರೆ ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸಿದೆ. ಸರ್ಕಾರ ಹಂಪಿ ಉತ್ಸವವನ್ನು ಮಾಡಲೇಬೇಕು ಎಂದು ಆಗ್ರಹಿಸಿದರು.

ಕನಸಲ್ಲಿ ಸಿಎಂ ಆಗುವುದು ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗುವುದು ಕನಸಿನಲ್ಲಿ. ಆದರೆ ಯಡಿಯೂರಪ್ಪ ನನಸಿನಲ್ಲಿ ಸಿಎಂ ಆಗುತ್ತಾರೆ. ಬಿಎಸ್​ವೈ ಸಿಎಂ ಆಗಲಿ ಎನ್ನುವುದು ರಾಜ್ಯದ ಜನರ ಅಪೇಕ್ಷೆ ಎಂದರು.

ಅಭಿವೃದ್ಧಿ ಕೆಲಸ ಮಾಡಲಿ
ಮೈತ್ರಿ ಪಕ್ಷಗಳು ಕಿತ್ತಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ. ಸಿದ್ದರಾಮಯ್ಯ ಸುಮ್ಮನೆ ವಿವಾದ ಸೃಷ್ಠಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಅದನ್ನು ಫಾಲೋ ಅಪ್ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಡ್ರಗ್ಸ್​ನಿಂದ ಅತ್ಯಾಚಾರ ಹೆಚ್ಚುತ್ತಿವೆ
ಮಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಜೊತೆ ಮಾತನಾಡಿ ಬಂದಿದ್ದೇನೆ. ಆರೋಪಿಗಳು ಭಯಾನಕವಾಗಿ ಕೃತ್ಯ ಎಸಗಿದ್ದಾರೆ. ಅಫೀಮು ಡ್ರಗ್ಸ್​ನಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದೆ. ಜಾಲವನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ. ಪೊಲೀಸರಿಗೆ ಕಠಿಣ ಶಿಕ್ಷೆ ನೀಡಬೇಕು. ಅಪರಾಧ ಜಾಲಗಳ ಮೂಲವನ್ನು ಪತ್ತೆ ಮಾಡಬೇಕು ಎಂದರು. (ದಿಗ್ವಿಜಯ ನ್ಯೂಸ್)