ಗೋಣಿಕೊಪ್ಪಲು: ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿ ಪಡೆದಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಬೋಡ್ ನಮ್ಮೆ ಇದೇ ಮೇ 17 ಹಾಗೂ 18ರಂದು ಶನಿವಾರ, ಭಾನುವಾರ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಹಳ್ಳಿಗಟ್ಟು ಬೋಡ್ ನಮ್ಮೆ ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿ ಹೊಂದಿದ್ದು, ಕಲ್ಲಿನ ಆನೆ ದೇವಸ್ಥಾನಕ್ಕೆ ಮುಖ ಮಾಡಿ ನಿಂತಿರುವ ದಕ್ಷಿಣ ಭಾರತದ ಏಕೈಕ ದೇವಸ್ಥಾನ ಕೂಡ ಇದಾಗಿದೆ. ಮೇ 17ರಂದು ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಪೂಜೆ ಹಾಗೂ ರಾತ್ರಿ ಮನೆಕಳಿ ನಡೆಯಲಿದ್ದು ಮೇ 18ರಂದು ಸಂಜೆ ಕುದುರೆ, ಮೊಗ ಹಾಗೂ ಪರಸ್ಪರ ಕೆಸರಿನ ಎರಚಾಟ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹಬ್ಬದ ಆಚರಣೆ: ಮೇ 17ರಂದು ಶನಿವಾರ ಬೆಳಗ್ಗೆ ಹಬ್ಬದ ವಿವಿಧ ಆಚರಣೆಗಳನ್ನು ನಡೆಸುವ ಮೂಲನಿವಾಸಿ ಪಣಿಕ ಜನಾಂಗದ ವ್ಯಕ್ತಿ ಊರು ತಕ್ಕರಾದ ಚಮ್ಮಟೀರ ಕುಟುಂಬದ ಬಲ್ಯಮನೆಗೆ ಆಗಮಿಸುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಲಿದೆ.
18ರಂದು ಬೆಳಗ್ಗೆಯಿಂದಲೇ ಚಮ್ಮಟೀರ ಹಾಗೂ ಮೂಕಳೇರ ಬಲ್ಯಮನೆಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಸೇರಿದಂತೆ ಎರಡು ಐನ್ ಮನೆಗಳಲ್ಲಿ ತಲಾ ಒಂದೊಂದು ಕುದುರೆ ಹಾಗೂ ಮೊಗಗಳ ಶೃಂಗಾರ ನಡೆಯುತ್ತದೆ.
ಸಂಜೆ 4.30ಕ್ಕೆ ಶ್ರೀ ಭದ್ರಕಾಳಿ ದೇವಸ್ಥಾನ ಸಮೀಪದ ಅಂಬಲದಲ್ಲಿ ಸೇರಿ ಪರಸ್ಪರ ಜನರು ಕೆಸರು ಎರಚಿಕೊಳ್ಳುತ್ತಾರೆ. ಮಹಿಳೆಯರು, ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಅವರಿಗೆ ಮುಕ್ತವಾಗಿ ಕುಣಿಯಲು ಅವಕಾಶವಿದ್ದು ಒಂದು ಬೆತ್ತದ ಕೋಲು ನೀಡಲಾಗುತ್ತದೆ. ಅಂತಹವರಿಗೆ ಕೆಸರು ಎರಚುವಂತಿಲ್ಲ. ಪರಸ್ಪರ ಕೆಸರು ಎರಚಾಟದ ನಂತರ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ಹಬ್ಬವು ಸಂಪನ್ನಗೊಳ್ಳುತ್ತದೆ ಎಂದು ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.