ಹಳಿಯಾಳ: ಪರಿಚಯಸ್ಥರ ಬೈಕ್ ತೆಗೆದುಕೊಂಡು ಹೋಗಿ ಮರಳಿ ನೀಡದ ದೂರಿನನ್ವಯ ಪಟ್ಟಣದ ಚವ್ಹಾಣ್ ಪ್ಲಾಟ್ ನಿವಾಸಿ ಕ್ರಿಮಿನಲ್ ಹಿನ್ನೆಲೆಯುಳ್ಳ ರಾಕೇಶ ದಿನಕರ ವಾಲೇಕರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಪಟ್ಟಣದ ಕಾನ್ವೆಂಟ್ ರೋಡ್ ನಿವಾಸಿ ರಾಹುಲ್ ಜಯವಂತ ವಾಣಿ ಅವರ ಮನೆಗೆ ಬಂದಿದ್ದ ರಾಕೇಶ ದಿನಕರ ವಾಲೇಕರ, ‘ನನಗೆ ತಕ್ಷಣಕ್ಕೆ 1 ಲಕ್ಷ ರೂ. ಕೊಡು, ನಿನಗೆ ಡಬಲ್ ಹಣ ನೀಡುವೆ’ ಎಂದಿದ್ದಾನೆ. ರಾಹುಲ್ ನನ್ನ ಬಳಿ ಹಣವಿಲ್ಲ ಎಂದಿದ್ದಾರೆ. ಹಾಗಾದರೆ ನಿನ್ನ ಬೈಕ್ ಕೊಡು, ಇಲ್ಲವಾದರೆ ಸಾಯಿಸುವೆ ಎಂದು ಜೀವ ಬೆದರಿಕೆ ಹಾಕಿ, ಸೆ. 7ರಂದು ಬೈಕ್ ತೆಗೆದುಕೊಂಡು ಹೋಗಿದ್ದ. ಈ ಕುರಿತು ರಾಹುಲ್ ಜಯವಂತ ವಾಣಿ ಅವರು ಸ್ಥಳೀಯ ಠಾಣೆಯಲ್ಲಿ ಸೆ. 12 ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ರಾಕೇಶನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಸೆ. 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.