‘ಸಾಮಾನ್ಯವಾಗಿ ಯಾರಾದರೂ ನಿರ್ಮಾಪಕರು ಅಭಿನಯಕ್ಕಿಳಿದರೆ ಇವರಿಗೇಕೆ ನಟಿಸುವ ಉಸಾಬರಿ ಅನಿಸುತ್ತದೆ. ಆದರೆ ನಿರ್ಮಾಪಕರಾಗಿರುವ ಅಶು ಬೆದ್ರ ಏಕೆ ಅಭಿನಯಿಸಲು ಮುಂದಾಗಿಲ್ಲ ಅಂತ ಅಂದುಕೊಂಡಿದ್ದಿದೆ. ಕೊನೆಗೂ ಅವರು ನಾಯಕನಾಗುವ ಮೂಲಕ ತಾವು ಉತ್ತಮ ಕಲಾವಿದ ಎಂಬುದನ್ನು ಸಾಬೀತು ಪಡಿಸಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದ್ದು ನಿರ್ದೇಶಕ ಸಿಂಪಲ್ ಸುನಿ. ಅಂದಹಾಗೆ ಇಂಥದ್ದೊಂದು ಸಂದರ್ಭಕ್ಕೆ ಕಾರಣವಾಗಿದ್ದು ‘ಅಳಿದು ಉಳಿದವರು’ ಸಿನಿಮಾದ 50 ದಿನಗಳ ಸಂಭ್ರಮ.
ಸಿನಿಮಾ 55 ದಿನಗಳ ಪ್ರದರ್ಶನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರದ ನಿರ್ವಪಕ, ನಾಯಕ ಅಶು ಬೆದ್ರ ಸಂತೋಷ ಕೂಟವೊಂದನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭ ಇಂಥದ್ದೊಂದು ಯಶಸ್ಸಿಗೆ ಕಾರಣರಾದವರ ಪರಿಶ್ರಮವನ್ನು ಸ್ಮರಿಸಿ, ಚಿತ್ರತಂಡದ ಸದಸ್ಯರಿಗೆ ಸ್ಮರಣಿಕೆ ಅರ್ಪಿಸಿ ಕೃತಜ್ಞತೆ ಸಲ್ಲಿಸಿದರು.
ಈ ಹಿಂದೆ ತಮ್ಮದೇ ನಿರ್ವಣದ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಸಿನಿಮಾಗೆ ನಿರ್ದೇಶನ ಮಾಡಿದ್ದ ಸಿಂಪಲ್ ಸುನಿ ಅವರಿಂದ ಅಶು ಬೆದ್ರ ತಮ್ಮ ಚಿತ್ರತಂಡ ಸದಸ್ಯರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಮೊದಲ ಸಿನಿಮಾದಲ್ಲೇ ಅಶು ಬೆದ್ರ ಹಾಫ್ ಸೆಂಚುರಿ ಬಾರಿಸಿದ್ದಾರೆ.
ಎರಡನೇ ಪ್ರಯತ್ನದಲ್ಲಿ ಖಂಡಿತ ಸೆಂಚುರಿ ಹೊಡೆಯುತ್ತಾರೆ ಎಂದು ಸುನಿ ವಿಶ್ವಾಸ ವ್ಯಕ್ತಪಡಿಸಿದರು. ‘ಈ ಸಿನಿಮಾ ಮಾಡಿದ್ದೇ ಒಂದು ಅದ್ಭುತ ಅನುಭವ. ಈ ದೊಡ್ಡ ತಂಡದ ಜತೆ ಚಿತ್ರ ಮಾಡುತ್ತ ಒಂದು ಕಮರ್ಷಿಯಲ್ ಸಿನಿಮಾ ಮಾಡುವುದು ಹೇಗೆ ಎಂಬುದನ್ನು ಕಲಿತೆ’ ಎಂದರು ನಿರ್ದೇಶಕ ಅರವಿಂದ್ ಶಾಸ್ತ್ರಿ. ಚಿತ್ರದ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಅವರಿಗೆ ಈ ಸಮಾರಂಭ ವಿಶೇಷವಾಗಿತ್ತು.
ಏಕೆಂದರೆ, ಅಂದು ಮಿಥುನ್ ಬರ್ತ್ ಡೇ ಆಗಿದ್ದರಿಂದ ಚಿತ್ರತಂಡದವರು 50ನೇ ದಿನದ ಸಂಭ್ರಮದ ಜತೆಗೆ ಮಿಥುನ್ ಜನ್ಮದಿನದ ಪ್ರಯುಕ್ತ ಕೇಕ್ ಕೂಡ ಕತ್ತರಿಸಿ ಶುಭ ಹಾರೈಸಿದರು. ಸಿನಿಮಾದ ಉಳಿದ ವಿಭಾಗದವರೂ ಉತ್ತಮವಾಗಿ ಮಾಡಿದ್ದರಿಂದ ಹಿನ್ನೆಲೆ ಸಂಗೀತವೂ ಉತ್ತಮವಾಗಿ ಮೂಡಿಬಂತು ಎಂದರು ಮಿಥುನ್. ಛಾಯಾಗ್ರಹಣಕ್ಕೆ ಅಶು ಬೆದ್ರ ಅವರ ಮೊದಲ ಆಯ್ಕೆಯೇ ನಾನಾಗಿದ್ದೆ, ಇದೊಂದು ಟೀಮ್ ಎಫರ್ಟ್ ಎಂದು ಖುಷಿ ಹಂಚಿಕೊಂಡರು ಕ್ಯಾಮರಾಮನ್ ಅಭಿಷೇಕ್ ಕಾಸರಗೋಡು. ಗೆದ್ದ ಸಿನಿಮಾ ತಂಡದ ಸದಸ್ಯನಾಗಿದ್ದಕ್ಕೆ ತುಂಬ ಖುಷಿ ಆಗುತ್ತಿದೆ ಎಂದರು ಹಾಸ್ಯನಟ ಧರ್ಮಣ್ಣ.