ಹಳೆಯಂಗಡಿಯಲ್ಲಿ ತ್ಯಾಜ್ಯ ಸಮಸ್ಯೆ

ಭಾಗ್ಯವಾನ್ ಸನಿಲ್ ಹಳೆಯಂಗಡಿ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಳೆಯಂಗಡಿ ಪೇಟೆಯನ್ನು ದಾಟಿ ಪಾವಂಜೆ ಪ್ರದೇಶದ ಮೊದಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ಲಾಸ್ಟಿಕ್ ಚೀಲಗಳು ಹಾಗೂ ಗೋಣಿಗಳಲ್ಲಿ ತುಂಬಿ ಬಿಸಾಡಿರುವ ತ್ಯಾಜ್ಯ ವಸ್ತುಗಳು ಕಣ್ಣಿಗೆ ರಾಚುತ್ತವೆ. ಇಲ್ಲಿ ದುರ್ವಾಸನೆ ಸ್ಥಳೀಯರಿಗೆ ಸಮಸ್ಯೆಯಾಗಿದೆ.

ಪ್ರಾಣಿ ಕಾಟ: ಈ ಪ್ರದೇಶದಲ್ಲಿ ಬಿಸಾಡಿದ ತ್ಯಾಜ್ಯ ವಸ್ತುಗಳನ್ನು ತಿನ್ನಲು ಬರುವ ಬೀಡಾಡಿ ಪ್ರಾಣಿಗಳು ಜಗಳವಾಡಿಕೊಂಡು ರಸ್ತೆಗೆ ತ್ಯಾಜ್ಯ ವಸ್ತುಗಳನ್ನು ಎಳೆದು ಹಾಕುವ ಕಾರಣ ದ್ವಿಚಕ್ರ ವಾಹನ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಶಾಲಾ ವಿದ್ಯಾರ್ಥಿಗಳನ್ನು ಈ ಪ್ರದೇಶದಲ್ಲಿ ಬಂದು ಸೇರುವ ನಾಯಿಗಳು ಓಡಿಸಿಕೊಂಡು ಬಂದು ಕಚ್ಚಿರುವ ನಿದರ್ಶನಗಳಿವೆ.

ಈ ಹಿಂದೆ ಒಂದೇ ಪ್ರದೇಶದಲ್ಲಿ ರಾಶಿ ಬೀಳುತ್ತಿದ್ದ ತ್ಯಾಜ್ಯ ಇದೀಗ ಇನ್ನೊಂದು ಖಾಸಗಿ ಸ್ಥಳಕ್ಕೂ ವಿಸ್ತರಿಸಿದೆ. ಕಸದ ರಾಶಿಯಿಂದ ಹಾರುವ ನೊಣ ಸೊಳ್ಳೆಗಳು ಹಾಗೂ ದುರ್ವಾಸನೆ ಸ್ಥಳೀಯರ ನಿದ್ದೆಗೆಡಿಸಿದೆ. ಇಲ್ಲಿನ ಪರಿಸರದ ಡಾಬಾ ಹಾಗೂ ಅಂಗಡಿ ಮುಂಗಟ್ಟುಗಳ ಜನರು ತ್ಯಾಜ್ಯ ಸಮಸ್ಯೆಯಿಂದ ಹೈರಾಣಾಗಿದ್ದಾರೆ.

ನಿಂತ ಆಡಳಿತ ಯಂತ್ರ: ಹಳೆಯಂಗಡಿ ಪಂಚಾಯಿತಿಯಲ್ಲಿ ಆಡಳಿತ ಯಂತ್ರ ನಿಂತ ಸ್ಥಿತಿಯಲ್ಲಿದೆ. ಸರಿಯಾಗಿ ತಿಂಗಳ ಸಭೆ ನಡೆಯದ ಕಾರಣ ಸಮಸ್ಯೆಯಾಗುತ್ತಿದೆ ಎಂದು ವಿಪಕ್ಷ ಸದಸ್ಯರು ದೂರಿದರೆ, ಅಧಿಕಾರಿ ವರ್ಗ ಕಾರ್ಯ ನಿರ್ವಹಿಸುವುದಿಲ್ಲ. ಈಗಾಗಲೇ ತಾಂತ್ರಿಕ ಸಮಸ್ಯೆ ಎಂದು ಹೇಳಿ ಪೌರ ಕಾರ್ಮಿಕರ ಸಂಬಳ ತಡೆ ಹಿಡಿಯಲಾಗಿದೆ ಎಂದು ಸದಸ್ಯರು ದೂರುತ್ತಿದ್ದಾರೆ. ಒಟ್ಟಾರೆ ಇಲ್ಲಿನ ರಾಜಕೀಯ ಸ್ಥಿತಿಯಿಂದಾಗಿ ಜನಸಾಮಾನ್ಯರು ಹೈರಾಣಾಗುವ ಸ್ಥಿತಿ ಉಂಟಾಗಿದೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಇಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಬೇಕಿದೆ.

ಹಳೆಯಂಗಡಿಯ ಮನೆಗಳ ತ್ಯಾಜ್ಯ ಪಡೆಯುವ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ. ಹೊರ ಪ್ರದೇಶದ ಜನರು ವಾಹನಗಳಲ್ಲಿ ಬಂದು ತ್ಯಾಜವನ್ನು ರಸ್ತೆ ಬದಿಯಲ್ಲಿ ಹಾಕಿ ಹೋಗುತ್ತಿರುವುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ನಮ್ಮ ಅಧಿಕಾರಿಗಳು ವಿಫಲರಾಗಿದ್ದಾರೆ.
ವಸಂತ ಬೆರ್ನಾಡ್, ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷರು, ಹಳೆಯಂಗಡಿ ಪಂಚಾಯಿತಿ

ಇಲ್ಲಿನ ದುರ್ನಾತ ಸಹಿಸಲಸಾಧ್ಯ. ನಡೆದು ಹೋಗುವಾಗ ಈ ಪ್ರದೇಶ ದಾಟುವವರೆಗೆ ಉಸಿರು ಬಿಗಿ ಹಿಡಿದು ಹೋಗಬೇಕಾಗಿದೆ. ಇಲ್ಲಿ ಬೀಡಾಡಿ ನಾಯಿಗಳು ನಮ್ಮನ್ನು ಕಚ್ಚಲು ಬರುತ್ತವೆ.
ವೆಂಕಟೇಶ ಸಾಲ್ಯಾನ್, ಸ್ಥಳೀಯರು

ತ್ಯಾಜ್ಯ ತಿನ್ನಲು ಬರುವ ಬೀಡಾಡಿ ಪ್ರಾಣಿಗಳು ಜಗಳವಾಡಿಕೊಂಡು ರಸ್ತೆಗೆ ಬಂದರೆ ಸಮಸ್ಯೆಯಾಗುತ್ತದೆ. ಹೆದ್ದಾರಿಯಲ್ಲಿ ಸಡನ್ ಬ್ರೇಕ್ ಹಾಕಿದರೆ ಹಿಂದೆ ಅತೀ ವೇಗದಲ್ಲಿ ಬರುವ ವಾಹನಗಳಿಂದ ಪ್ರಾಣಾಪಾಯವಾಗುವ ಸಂಭವ ಹೆಚ್ಚು.
ರಜಾಕ್, ರಿಕ್ಷಾ ಚಾಲಕರು. ಇಂದಿರಾ ನಗರ ಹಳೆಯಂಗಡಿ

Leave a Reply

Your email address will not be published. Required fields are marked *