ಹಲಸೂರು ಮೀಸಲು ಅರಣ್ಯದಲ್ಲಿ ಹುಲಿ

ಬಾಳೆಹೊನ್ನೂರು: ಸಮೀಪದ ಹಲಸೂರು ದಲ್ಲಿ ಮಧ್ಯಾಹ್ನದ ವೇಳೆ ಹುಲಿಯೊಂದು ಸಂಚರಿಸುತ್ತಿರುವುದು ಅರಣ್ಯ ಇಲಾಖೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅರಣ್ಯ ಇಲಾಖೆ ಹಲಸೂರು ಸೇರಿ ಸುತ್ತಮುತ್ತ ಕಾಡಿನ ಹಲವು ಭಾಗದಲ್ಲಿ 24 ಕ್ಯಾಮರಾ ಅಳವಡಿಸಿದೆ. ಡಿ.28ರಂದು ಮಧ್ಯಾಹ್ನ 2.12ರ ವೇಳೆಗೆ ಸುಮಾರು ಎಂಟು ವರ್ಷದ ಹೆಣ್ಣು ಹುಲಿಯೊಂದು ಸಂಚರಿಸುತ್ತಿರುವ ಚಿತ್ರ ಸೆರೆಯಾಗಿದೆ.

ಕ್ಯಾಮರಾ ಅಳವಡಿಕೆಯಿಂದಾಗಿ ಕಾಡಿನ ಒಳಭಾಗದಲ್ಲಿ ನಡೆಯುವ ಕಳ್ಳಬೇಟೆ, ಪ್ರಾಣಿಗಳ ಬೇಟೆಗಾಗಿ ಬಳಸುವ ಉರುಳು ಮುಂತಾದ ಅಕ್ರಮ ತಡೆಯಬಹುದಾಗಿದೆ. ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ಹುಲಿ ಕಾಣಿಸಿಕೊಂಡ ಚಿತ್ರ ಸೆರೆಯಾಗಿತ್ತು. ಇದೀಗ ಎರಡನೇ ಬಾರಿ ಇಲ್ಲಿ ಕಾಣಿಸಿಕೊಂಡಿದೆ. ಕಾಡಿನ ಒಳಭಾಗದಲ್ಲಿ ಕಳ್ಳಬೇಟೆಗಾರರು ಪ್ರಾಣಿಗಳನ್ನು ಹಿಡಿಯಲು ಉರುಳು ಹಾಕಿರುವುದು ಕಂಡುಬಂದಲ್ಲಿ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಅಲ್ಲದೆ ಎಲ್ಲ ಜಾತಿಯ ಪ್ರಾಣಿಗಳ ಚಲನವಲನ ಕೂಡ ಕ್ಯಾಮರಾದಲ್ಲಿ ಸೆರೆಯಾಗಲಿದ್ದು ಕಾಡಿನ ಒಳಭಾಗದ ಎಲ್ಲ ಚಟುವಟಿಕೆಗಳ ಸ್ಪಷ್ಟ ಚಿತ್ರಣ ದೊರೆಯಲಿದೆ. ಎಸಿಎಫ್ ಸತೀಶ್ ಮಾರ್ಗದರ್ಶನದಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು ಬೆಂಕಿ ಅನಾಹುತವನ್ನೂ ಇದರಿಂದ ತಪ್ಪಿಸಬಹುದಾಗಿದೆ ಎನ್ನುತ್ತಾರೆ ಆರ್​ಎಫ್​ಒ ಎನ್.ವಿ.ತನುಜ್​ಕುಮಾರ್.