ಯೂರೋಪ್​ಗೂ ವ್ಯಾಪಿಸಿದ ಎಚ್​ಎಎಲ್ ಖ್ಯಾತಿ: ಎಚ್​ಎಎಲ್ ನಿರ್ಮಾಣದ ಡೋರ್ನಿಯರ್ ವಿಮಾನಕ್ಕೆ ಇಯು ಅನುಮತಿ

ನವದೆಹಲಿ: ದೇಶದ ಹೆಮ್ಮೆಯ ವಿಮಾನ ತಯಾರಿಕಾ ಸಂಸ್ಥೆ ಹಿಂದುಸ್ಥಾನ್ ಏರೋನಾಟಿಕ್ಸ್​ ಲಿಮಿಟೆಡ್​​ ಕೀರ್ತಿ ಪತಾಕೆ ಯೂರೋಪ್​ಗೂ ವ್ಯಾಪಿಸಿದೆ. ಎಚ್​ಎಎಲ್ ನಿರ್ಮಾಣದ ಡೋರ್ನಿಯರ್-228 ವಿಮಾನ ನಾಗರೀಕ ಬಳಕೆಗೆ ಯೂರೋಪಿಯನ್ ಯೂನಿಯನ್​ ಏವಿಯೇಷನ್ ಸೇಫ್ಟಿ ಏಜೆನ್ಸಿ(ಇಎಎಸ್​ಎ) ಅನುಮತಿ ನೀಡಿದೆ.

ಮೇಡ್​ ಇನ್ ಇಂಡಿಯಾ ನಿರ್ಮಾಣದ ವಿಮಾನ ಇದೇ ಮೊದಲ ಬಾರಿಗೆ ಯೋರೋಪ್​ನ ಆಗಸದಲ್ಲಿ ಹಾರಾಟ ನಡೆಸಲು ಸಿದ್ಧತೆ ನಡೆಸಿದೆ. ಡೋರ್ನಿಯರ್ 228 ಗೆ ಭಾರತದ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ 2017 ಅಂತ್ಯದಲ್ಲೇ ಅನುಮತಿ ಪತ್ರ ನೀಡಿತ್ತು.

“ಡಿಜಿಸಿಎ ಪತ್ರಕ್ಕೆ ಇಎಎಸ್​​ಎ ಮಾನ್ಯತೆ ನೀಡಿದ್ದು, ಡೋನಿರ್ಯರ್ ವಿಮಾನ ಯೂರೋಪ್​ನಲ್ಲೂ ವಾಣಿಜ್ಯ ಬಳಕೆಗೆ ದೊರೆಯಲಿದೆ. ಮೇಕ್​ ಇನ್ ಇಂಡಿಯಾ ಯೋಜನೆಯ ಮಹತ್ವದ ಗುರಿ ಸಾಧನೆ” ಇದಾಗಿದೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿಮಾನ 19 ಆಸನಗಳನ್ನು ಹೊಂದಿದ್ದು, ಸೇನಾ ಪಡೆ ಅಧಿಕ ಪ್ರಮಾಣದಲ್ಲಿ ಬಳಸುತ್ತದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಲ್ಲಿ ಪ್ರಾದೇಶಿಕ ವಾಯುಸಾರಿಗೆ ಬಲಪಡಿಸಲು ಈ ವಿಮಾನಗಳನ್ನು ಸಣ್ಣ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

ಡೋರ್ನಿಯರ್ ವಿಮಾನಗಳು ಬಹುಪಯೋಗಿ ಲಘು ಸಾರಿಗೆ ವಿಮಾನಗಳಾಗಿದ್ದು, ಉತ್ತರ ಪ್ರದೇಶದ ಕಾನ್ಪುರದ ಎಚ್​ಎಎಲ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಗಂಟೆಗೆ 428 ಕಿಮೀ ವೇಗದಲ್ಲಿ ಸಾಗುವ ಇವು, 700 ಕಿಮೀ ಹಾರಾಟ ವ್ಯಾಪ್ತಿ ಹೊಂದಿವೆ.