More

    ಅಕ್ರಮ ಮನೆ ಸಕ್ರಮ ಚುರುಕು; 10 ಸಾವಿರ ಫಲಾನುಭವಿಗಳಿಗೆ ಕ್ರಯಪತ್ರ  

    ಬೆಂಗಳೂರು:  ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ವಿುಸಿಕೊಂಡ ಬಡವರಿಗೆ ಆ ಜಾಗದ ಹಕ್ಕು ನೀಡುವ ಕಾರ್ಯಕ್ಕೆ ಚುರುಕು ನೀಡಲಾಗಿದೆ. ಜ.28ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ 10 ಸಾವಿರ ಫಲಾನುಭವಿಗಳಿಗೆ ಕ್ರಯಪತ್ರ ನೀಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

    2012ಕ್ಕೆ ಮುನ್ನ ಮನೆ ನಿರ್ವಿುಸಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ನೀಡಲಾಗುತ್ತಿದೆ. ಒಟ್ಟಾರೆ ಸಕ್ರಮಕ್ಕೆ ಕೋರಿ 2,53,072 ಅರ್ಜಿಗಳು ಬಂದಿದ್ದವು. 60,061 ಫಲಾನುಭವಿಗಳಿಗೆ ಮಂಜೂರಾತಿ ಸಿಕ್ಕಿದೆ, 1,47,465 ಅರ್ಜಿ ತಿರಸ್ಕೃತ ಗೊಂಡಿದೆ. 45 ಸಾವಿರ ಅರ್ಜಿ ವಿಲೇವಾರಿ ಬಾಕಿ ಇದೆ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

    ಪಡಿತರಚೀಟಿ, ಆಧಾರ್, ವಿದ್ಯುತ್, ನೀರು ಸಂಪರ್ಕ ಸೇರಿ ಎಲ್ಲ ಮಾಹಿತಿ ಆಧರಿಸಿಯೇ ಅರ್ಹರನ್ನು ಆಯ್ಕೆ ಮಾಡಲಾಗಿದೆ. ಬೋಗಸ್ ಅರ್ಜಿಗಳನ್ನು ತಿರಸ್ಕರಿಸ ಲಾಗಿದೆ. ಇದೀಗ ಸಮರೋಪಾದಿಯಲ್ಲಿ ಫಲಾನುಭವಿಗಳಿಗೆ ಕ್ರಯಪತ್ರ ನೀಡಲಾಗುತ್ತದೆ. ಈ ಬಗ್ಗೆ ತಾವೇ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರುವುದಾಗಿ ತಿಳಿಸಿದರು.

    ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ವಿುಸಿಕೊಂಡಿರುವ ಬಡವರ ಮನೆಗಳನ್ನು ಮಾತ್ರ ಸಕ್ರಮಗೊಳಿಸಲಾಗುವುದು. 2030 ಮತ್ತು 3040 ಅಡಿ ಅಳತೆಯ ಮನೆಗಳಿಗೆ ಮಾತ್ರ ಇದು ಅನ್ವಯವಾಗಲಿದ್ದು, ರಾಜ್ಯಾದ್ಯಂತ ಪ್ರಕ್ರಿಯೆ ಆರಂಭವಾಗಲಿದೆ. ಅಳತೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗಿದ್ದು, ಈ ಶುಲ್ಕ ಪಾವತಿಸಬೇಕು ಎಂದರು.

    ಜ.28ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ 10 ಸಾವಿರ ಫಲಾನುಭವಿಗಳಿಗೆ ಕ್ರಯಪತ್ರ ನೀಡಲಾಗುವುದು ಎಂದು ಹೇಳಿದರು. ತಾವು ಕಂದಾಯ ಸಚಿವರಾದ ನಂತರ 1,190 ಎಕರೆ ಸರ್ಕಾರಿ ಜಮೀನನ್ನು ಸಾರ್ವಜನಿಕ ಕಾರ್ಯಗಳಿಗೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

    ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವಿಕೆ ಮತ್ತು ಸಂರಕ್ಷಿಸುವ ಸಲುವಾಗಿ ರಚಿಸಲಾಗಿದ್ದ ಎ.ಟಿ. ರಾಮಸ್ವಾಮಿ ನೇತೃತ್ವದ ಸಮಿತಿ ವರದಿ ನೀಡಿದ್ದು, ಕಾರ್ಯರೂಪಕ್ಕೆ ತರಲು ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಆರಗ ಜ್ಞಾನೇಂದ್ರ, ಎಸ್.ಆರ್. ವಿಶ್ವನಾಥ್, ನರಸಿಂಹನಾಯಕ್, ಎ.ಟಿ. ರಾಮಸ್ವಾಮಿ ಮತ್ತು ರಾಜಶೇಖರ್ ಪಾಟೀಲ್ ಸದಸ್ಯರಾಗಿದ್ದಾರೆ. ಈ ಸಮಿತಿ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಪರಿಶೀಲಿಸಲಿದೆ. ತೆರವುಗೊಂಡ ಭೂಮಿ ರಕ್ಷಣೆ ಮಾಡಲು ಕ್ರಮ ಕೈಗೊಳ್ಳುತ್ತದೆ ಎಂದರು.

    ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾವೋಸ್ ಪ್ರವಾಸದಿಂದ ಹಿಂದಿರುಗಿದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಹಾಯ ಮಾಡಿದವರಿಗೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗುವುದು ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು. ಕಾಂಗ್ರೆಸ್​ನವರಿಗೆ ಅಧಿಕಾರ ಬಿಟ್ಟು ಇರಲು ಆಗಲ್ಲ. ಏನೇನೋ ಯೋಜನೆ ಕೊಟ್ಟೆನೆಂದರೂ ಸಿದ್ದರಾಮಯ್ಯ ಸರ್ಕಾರವನ್ನು ಜನ ಇಳಿಸಿ ಕಪಾಳ ಮೋಕ್ಷ ಮಾಡಿದರು. ಆದರೆ, ಅಧಿಕಾರಕ್ಕಾಗಿ ಮಾನ ಮರ್ಯಾದೆ ಇಲ್ಲದೆ ಜೆಡಿಎಸ್​ನ ಮನೆ ಬಾಗಿಲಿಗೆ ಹೋದರು. ಈಗ ಏನೋ ಆಗಿ ಬಿಡುತ್ತದೆ ಎಂದು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಪ್ರತಿ ಹಳ್ಳಿಯಲ್ಲೂ ಇರುವ ಸರ್ಕಾರಿ ಭೂಮಿಯನ್ನು ಗುರುತಿಸಿ ಸ್ಮಶಾನ, ಶಾಲೆ, ಅಂಗನವಾಡಿ, ಆಸ್ಪತ್ರೆ, ವಿದ್ಯಾರ್ಥಿನಿಲಯ ಮತ್ತಿತರ ಸಾರ್ವಜನಿಕ ಬಳಕೆಗೆ ಉಪಯೋಗಿಸಲು ಸೂಚಿಸಲಾಗಿದೆ.

    | ಆರ್. ಅಶೋಕ್ ಕಂದಾಯ ಸಚಿವ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts