Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಸಿಂಧಿಗಳ ಸಂಕಷ್ಟಕ್ಕೆ ಕೊನೆ ಇಲ್ಲವೆ…

Tuesday, 16.01.2018, 3:05 AM       No Comments

ಸಿಂಧಿಗಳಿಗಾಗಿ ಪ್ರತ್ಯೇಕ ಸಿಂಧ್ ರಾಷ್ಟ್ರ ಬೇಕು ಎನ್ನುವ ಕೂಗು ವ್ಯಾಪಕವಾಗುತ್ತಿದೆ. ಪಾಕಿಸ್ತಾನ ಇನ್ನೂ ಬಹಳ ಕಾಲ ಇವರ ದನಿಯನ್ನು ಅದುಮಲು ಸಾಧ್ಯವಿಲ್ಲ. ಸಿಂಧ್ ಪ್ರತ್ಯೇಕ ರಾಷ್ಟ್ರವಾದರೆ ಅದರಿಂದ ಭಾರತಕ್ಕೆ ಲಾಭವಿದೆ, ಭಯೋತ್ಪಾದನೆ ರಫ್ತಾಗುತ್ತಿರುವ ದಾರಿಗಳನ್ನು ಮುಚ್ಚಲು ಇದರಿಂದ ನೆರವಾಗಲಿದೆ.

 ಪ್ರಪಂಚದ ಇತಿಹಾಸವನ್ನು ಅವಲೋಕಿಸುವಾಗ ‘ಸಿಂಧೂ ನಾಗರಿಕತೆ’ಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಆದರೆ ಭೂಪಟದ ಮೇಲೆ ಒಮ್ಮೆ ಕಣ್ಣಾಡಿಸಿದರೆ ಅಚ್ಚರಿ ಹಾಗೂ ಆಘಾತ ಎರಡೂ ಒಟ್ಟೊಟ್ಟಿಗೆ ಆಗುತ್ತದೆ. ಹಿಂದೂ ಮಹಾಸಾಗರದ ಪಶ್ಚಿಮದ ಭಾಗವನ್ನು ಅರಬ್ ಸಾಗರ ಎಂದು ಕರೆಯಲಾಗಿದೆ! ಭೌಗೋಳಿಕ ವಿಸ್ತೀರ್ಣದಲ್ಲಿ ವಿಶಾಲವಾಗಿದ್ದು ಪ್ರಾಚೀನತೆ, ತನ್ನದೇ ಆದ ಸಂಸ್ಕೃತಿ ಹೊಂದಿದ್ದರೂ ಅದನ್ನು ಸಿಂಧೂ ಸಾಗರ ಎಂದು ಹೆಸರಿಸಿಲ್ಲ. ಅಷ್ಟೇ ಅಲ್ಲ, ಸಿಂಧೂ ನಾಗರಿಕತೆಯನ್ನು ಪೋಷಿಸುತ್ತಿರುವ, ರಕ್ಷಿಸುತ್ತಿರುವ ಸಿಂಧ್ ಪ್ರದೇಶ ಹಾಗೂ ಅಲ್ಲಿನ ನಿವಾಸಿಗಳಾದ ಸಿಂಧಿಗಳು ಯಾವೆಲ್ಲ ಸಮಸ್ಯೆಗಳೊಂದಿಗೆ ಸೆಣೆಸುತ್ತಿದ್ದಾರೆ? ಅವರು ಎದುರಿಸುತ್ತಿರುವ ಸಮಸ್ಯೆಗಳೇನು? ಈ ಬಗ್ಗೆ ಎಲ್ಲೂ ಚರ್ಚೆಗಳು ನಡೆಯುವುದಿಲ್ಲ.

ಭಾರತದ ವಿಭಜನೆ ಪ್ರಾಕೃತಿಕ ಸೀಮೆಗಳ ಪ್ರಕಾರ ನಡೆಯಲಿಲ್ಲ ಎಂಬುದು ಗೊತ್ತಿರುವಂಥದ್ದೇ. ಪಾಕಿಸ್ತಾನದ ನಿರ್ವಣವನ್ನು ಧರ್ವಧಾರಿತ ಜನಸಂಖ್ಯೆಯನ್ನು ಅನುಸರಿಸಿ ಮಾಡಲಾಗಿತ್ತು. ಹಾಗಾಗಿ, ಧರ್ಮದ ಆಧಾರದಲ್ಲೇ ಸ್ಥಾಯಿ ನಾಗರಿಕರು ಮತ್ತು ಶರಣಾರ್ಥಿಗಳು ಎಂಬ ವಿಭಜನೆ ಸೃಷ್ಟಿಯಾಯಿತು. ಸಾಂಸ್ಕೃತಿಕ ಮತ್ತು ನೈಸರ್ಗಿಕ ಆಧಾರದಲ್ಲಿ ಸಿಂಧೂ ಸಾಗರವಾಗಬೇಕಾಗಿದ್ದು ಅರಬ್ ಸಾಗರವಾಗಿಯೇ ಉಳಿದುಕೊಂಡಿತು. ಅದರಲ್ಲೂ, ಸಿಂಧ್ ಪ್ರಾಂತ್ಯದ ವಿಭಜನೆ ಹಲವು ಮಾಸದ ಗಾಯಗಳನ್ನು ಸೃಷ್ಟಿಸಿತು. ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಬಂದ ಸಿಂಧಿಗಳು ಕ್ರಮೇಣ ಬದುಕು ಕಟ್ಟಿಕೊಂಡದ್ದು ಮಾತ್ರವಲ್ಲ ತಮ್ಮದೇ ಆದ ಪುಟ್ಟ ಪ್ರಪಂಚವನ್ನೂ ಸೃಷ್ಟಿಸಿಕೊಂಡರು. ಆದರೆ, ಧರ್ಮ ಮತ್ತು ಶ್ರದ್ಧೆಯ ಆಧಾರದಲ್ಲಿ ಸಿಂಧ್​ನಲ್ಲೇ ನೆಲೆಸಿದ ಜನರ ನೋವು ಮತ್ತು ನಿಟ್ಟುಸಿರು ಅರಣ್ಯರೋದನವಾಗಿಯೇ ಉಳಿದಿದೆ. ‘ವಿಭಜನೆ ಹೊತ್ತಲ್ಲೇ ನಾವೂ ಭಾರತಕ್ಕೆ ಹೋಗಿದ್ದಲ್ಲಿ ಇಂಥ ಸ್ಥಿತಿ ಬರುತ್ತಿರಲಿಲ್ಲ. ಮಾತೃಭೂಮಿ ಬಿಟ್ಟುಹೋಗಬಾರದು ಎಂಬ ಭಾವನೆಗೆ ಸಿಲುಕಿ ಇಲ್ಲೇ ಉಳಿದು ತಪ್ಪು ಮಾಡಿದೆವು. ಈಗ ಆ ತಪ್ಪಿನ ಅರಿವು ಆಗುತ್ತಿದೆ’ ಎನ್ನುವ ಸಿಂಧಿಗಳಿಗೆ ಜಗತ್ತು ತಮ್ಮ ನೋವನ್ನು ಆಲಿಸುತ್ತಿಲ್ಲ ಎಂಬ ಅಸಮಾಧಾನವೂ ಇದೆ.

ತೀವ್ರವಾದ ಆಂದೋಲನ: ಸಿಂಧ್ ನಾಗರಿಕರು ಪಾಕಿಸ್ತಾನದ ವರ್ತನೆಯಿಂದ ರೋಸಿಹೋಗಿದ್ದಾರೆ. ಪಾಕ್ ಸರ್ಕಾರಗಳು ಇವರ ಮೇಲೆ ಯಾವ ಪರಿ ದೌರ್ಜನ್ಯವೆಸಗಿವೆ ಎಂದರೆ ಸಿಂಧಿಗಳು ತಮ್ಮ ಮಾತೃಭೂಮಿಯಲ್ಲಿಯೇ ನಿರಾಶ್ರಿತರಂತೆ ಬದುಕುವಂತಾಗಿದೆ. ಅಲ್ಲಿ ಅವರಿಗೆ ಯಾವ ಹಕ್ಕುಗಳು, ಸೌಲಭ್ಯಗಳೂ ಇಲ್ಲ. ಕಣ್ಣೀರಿನಲ್ಲೇ ಕೈತೊಳೆಯುತ್ತಿರುವ ಇಲ್ಲಿನ ಜನರ ದಾರುಣ ಬದುಕು ಅದ್ಯಾಕೋ ಯಾವುದೇ ‘ಮಾನವ ಹಕ್ಕು’ ಸಂಘಟನೆಗಳ ಕಣ್ಣಿಗೂ ಬಿದ್ದಿಲ್ಲ! ಸಿಂಧ್ ಸಂಸ್ಕೃತಿ ಹಾಗೂ ಜೀವನಪದ್ಧತಿಯನ್ನು ನಾಶಗೊಳಿಸಬೇಕೆಂದು ಪಣ ತೊಟ್ಟಿರುವ ಪಾಕ್ ಅವರ ನಂಬಿಕೆಗಳ ಮೇಲೆ ಮೇಲಿಂದಮೇಲೆ ಆಘಾತ ಮಾಡುತ್ತಿದೆ; ಅವರನ್ನು ದ್ವಿತೀಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲ, ಪಾಕಿಸ್ತಾನಿ ಸೇನೆ ಹಾಗೂ ಐಎಸ್​ಐ ಹಿಂದೆ ನಿಂತುಕೊಂಡು ಇಲ್ಲಿ ಕ್ರೌರ್ಯವನ್ನು ಹರಡುತ್ತಿವೆ. ಸಿಂಧಿಗಳ ಅಪಹರಣ, ಕೊಲೆ, ಮಹಿಳೆಯರ ಮಾನಭಂಗ… ದಿನನಿತ್ಯದ ಸಂಗತಿಗಳಂತೆ ಆಗಿಬಿಟ್ಟಿವೆ. ತಮ್ಮ ನೆಲದಲ್ಲೇ ಒದಗಿರುವ ಈ ದುಸ್ಥಿತಿಯಿಂದ ಅವರು ಕಂಗಾಲಾಗಿದ್ದಾರೆ. ದನಿ ಎತ್ತದಿದ್ದರೆ ಮರಣವೇ ಗತಿ ಎಂಬ ವಾಸ್ತವ ಸಿಂಧಿಗಳ ಅರಿವಿಗೆ ಬಂದಿದ್ದು, ಅವರೀಗ ಪಾಕಿಸ್ತಾನ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ‘ನಮ್ಮ ಸಂಸ್ಕೃತಿ, ಜೀವನಪದ್ಧತಿಯನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ರೂಪಿಸಿಕೊಳ್ಳಲು ನಮಗೆ ಪ್ರತ್ಯೇಕ ರಾಷ್ಟ್ರ ನೀಡಿ’ ಎಂದು ಹೋರಾಡುತ್ತಿದ್ದಾರೆ.

ಇತಿಹಾಸದ ಪುಟಗಳು: ಜಗತ್ತಿನ ಪ್ರಮುಖ ಏಳುಬೀಳುಗಳತ್ತ ಗಮನ ಹರಿಸಿದಾಗ ಸಿಂಧಿಗಳಿಗೆ ಬಂದಂತಹ ಸ್ಥಿತಿಯೇ ಪಾರ್ಸಿ ಹಾಗೂ ಯಹೂದಿಗಳಿಗೂ ಬಂದಿದ್ದು ವೇದ್ಯವಾಗುತ್ತದೆ. ಯಹೂದಿಗಳು ಹೋರಾಟ, ಕಾದಾಟ ನಡೆಸಿ ತಮ್ಮದೇ ಆದ ಇಸ್ರೇಲ್ ದೇಶವನ್ನು ಕಟ್ಟಿಕೊಂಡರು. ಆದರೆ, ಪಾರ್ಸಿಗಳಿಗೆ ಅವರ ಮಾತೃದೇಶ ಇರಾನ್​ಗೆ ಮರಳಲು ಸಾಧ್ಯವಾಗಲಿಲ್ಲ. ಹಾಗಾಗಿ, ಪಾರ್ಸಿಗಳು ಎಲ್ಲಿ ನೆಲೆಸುತ್ತಾರೋ ಅಲ್ಲೇ ತಮ್ಮ ಪುಟ್ಟ ಪ್ರಪಂಚ ಕಟ್ಟಿಕೊಳ್ಳತೊಡಗಿದರು. ಮಾತ್ರವಲ್ಲ ತಮ್ಮ ಶ್ರಮಶಕ್ತಿ ಹಾಗೂ ಬೌದ್ಧಿಕ ಬಲದಿಂದ ಕೆಲವೊಮ್ಮೆ ಟಾಟಾ ಆಗಿ ಮಗದೊಮ್ಮೆ ಭಾಭಾ ಆಗಿ ಗಮನಸೆಳೆದರು. ಈ ಮೂಲಕ ಪೂರ್ತಿ ವಿಶ್ವವೇ ತಮ್ಮ ಪರಿವಾರ ಎಂಬುದನ್ನು ಸಿಂಧಿಗಳು, ಯಹೂದಿಗಳು ಹಾಗೂ ಪಾರ್ಸಿಗಳು ಸಾಬೀತು ಮಾಡಿದರು. ಯಾವ ದೇಶದಲ್ಲಿ ನೆಲೆಸಿದರೂ ಅಲ್ಲಿ ಪ್ರಾಮಾಣಿಕತೆ, ಸೌಹಾರ್ದ, ಸೌಜನ್ಯ ಹಾಗೂ ಭ್ರಾತೃತ್ವದಿಂದ ಬದುಕಿ ಮಾನವೀಯತೆಯ ಧ್ವಜವನ್ನು ಹಾರಾಡಿಸಿದರು. ವೈಚಿತ್ರ್ಯ ನೋಡಿ, ಪ್ರಪಂಚ ಯಾರನ್ನು ನಿರ್ಗತಿಕರನ್ನಾಗಿ ಮಾಡಿತ್ತೋ ಅಂಥ ನಿರ್ಗತಿಕರೇ ತಮ್ಮದೆ ಆದ ನೆಲೆ ಕಟ್ಟಿಕೊಂಡು, ಈ ಪ್ರಪಂಚವನ್ನು ಮತ್ತಷ್ಟು ಪ್ರಗತಿಶೀಲ ಹಾಗೂ ಸುಖಿಯಾಗಿಸಿದರು. ಸಿಂಧ್​ನಿಂದ ಭಾರತಕ್ಕೆ ಬಂದ ಸಿಂಧಿಗಳು ಇಲ್ಲಿ ಕರ್ಮವಾದಿಗಳಾಗಿ ಬದುಕಿ ಯಶಸ್ಸಿನ ಹೊಸ ಮಜಲುಗಳನ್ನು ತಲುಪಿದರು.

ಹೀಗೆ ಸಿಂಧಿಗಳ ಬದುಕಿನ ವೇದನೆ-ಸಾಧನೆ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ರಚನೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಈ ಮೂಲಕವಾದರೂ ಸಿಂಧಿಗಳು ಎದುರಿಸಿದ ಬವಣೆ, ಅನುಭವಿಸುತ್ತಿರುವ ನೋವು, ಸಂಕಷ್ಟ ಜಗತ್ತಿನ ಗಮನಕ್ಕೆ ಬರಬಹುದು. ಖ್ಯಾತ ಲೇಖಕಿ ಸಾಜ್ ಅಗರ್​ವಾಲ್ ರಚಿಸಿರುವ ‘ಸಿಂಧ್ ಆಂಡ್ ಸಿಂಧಿ’ ಕೃತಿಯು ಇತ್ತೀಚೆಗೆ ಕೋಲ್ಕತಾದ ಆರ್ಕ್ಸ್​ಫರ್ಡ್ ಸ್ಟೋರ್​ನಲ್ಲಿ ಲೋಕಾರ್ಪಣೆಗೊಂಡಿತು. ಸಿಂಧ್​ನಿಂದ ಭಾರತಕ್ಕೆ ಬಂದು ನೆಲೆಸಿರುವ ಸಾಜ್ ವಿಭಜನೆ ಹೊತ್ತಲ್ಲಿನ ನೋವು-ತಲ್ಲಣಗಳನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ವಿಶೇಷವಾಗಿ ಅವರ ತಾಯಿಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ವಿಭಜನೆಯಿಂದ ತುಂಬ ನೊಂದಿದ್ದ ಹಾಗೂ ಆ ನಂತರ ಸೃಷ್ಟಿಯಾದ ಪರಿಸ್ಥಿತಿಗಳಿಂದ ಭಯಭೀತಗೊಂಡಿದ್ದ ತಾಯಿ ಆಗ ಮಾತಿನಲ್ಲಿ ಹೇಳಿದೆಲ್ಲವನ್ನು ದಾಖಲಿಸಿ, ಸಂಕಲಿಸಿ ಸಾಜ್ ಈ ಕೃತಿ ಹೊರತಂದಿದ್ದಾರೆ. ಸಿಂಧ್ ಹಿಂದುಗಳ ಕುರಿತಾಗಿ ಈ ಹಿಂದೆಯೂ ಸಾಜ್ ಅಗರ್​ವಾಲ್ ಕೆಲ ಕೃತಿಗಳನ್ನು ಬರೆದಿದ್ದಾರೆ. ಸಿಂಧಿಗಳ ಸಮಸ್ಯೆಯನ್ನು ಯಾರೂ, ಭಾರತ ಕೂಡ ಗಂಭೀರವಾಗಿ ಪರಿಗಣಿಸಿಲ್ಲ. ಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ವಿಷಯಗಳಷ್ಟೇ ಆಂತಾರಾಷ್ಟ್ರೀಯ ವಲಯದಲ್ಲಿ ಚರ್ಚೆಯಾಗುತ್ತವೆ. ಆದರೆ, ಕಾಶ್ಮೀರ, ಅಫ್ಘಾನಿಸ್ತಾನಕ್ಕಿಂತಲೂ ಭೀಕರ ಪರಿಸ್ಥಿತಿ ಸಿಂಧ್​ನದ್ದಾಗಿದೆ. ಆದರೂ, ಎಲ್ಲರೂ ಏಕೆ ಈ ಬಗ್ಗೆ ಮೌನ ತಳೆದಿದ್ದಾರೆ ಎಂದು ಆ ಲೇಖಕಿ ಸಾತ್ವಿಕ ಕೋಪವನ್ನೂ ವ್ಯಕ್ತಪಡಿಸುತ್ತಾರೆ. ಮಾತೃಭೂಮಿಯನ್ನು ಬಿಟ್ಟು ಬರಬೇಕಾದರೆ ಸಿಂಧಿಗಳು ಎಷ್ಟು ಯಾತನೆ ಅನುಭವಿಸಿದರು ಎಂಬ ಅಂದಾಜು ಯಾರಿಗೂ ಇಲ್ಲ. ಇತಿಹಾಸಕಾರರು ಕೂಡ ಈ ಸಂಗತಿಗಳತ್ತ ಉಪೇಕ್ಷೆ ತೋರಿದ್ದಾರೆ. ಭಾರತದಲ್ಲಿ ಬಂಗಾಳ, ಪಂಜಾಬ್ ಹೋರಾಟಗಳನ್ನಷ್ಟೇ ಪ್ರಮುಖವಾಗಿ ಬಿಂಬಿಸಲಾಗಿದ್ದು, ಸಿಂಧ್ ಹಿಂದುಗಳು ತಮ್ಮ ಮಾತೃಭೂಮಿಯ ರಕ್ಷಣೆಗೆ ಯಾವ ಪರಿ ಹೋರಾಡಿದರು ಎಂಬುದು ಮುಖ್ಯವೇ ಆಗಲಿಲ್ಲ. ಇದು ದುರದೃಷ್ಟಕರ ಸಂಗತಿ ಎಂದಿರುವ ಸಾಜ್ ಅವರು ಈ ನಿಟ್ಟಿನಲ್ಲಿ ಸಿಂಧ್ ನೆಲದ ಪರಿಮಳ, ಅಲ್ಲಿ ಅಡಗಿರುವ ನೋವು ಇದನ್ನೆಲ್ಲ ಹೊರಜಗತ್ತಿಗೆ ಸಾರಿ ಹೇಳಲು ಈ ಕೃತಿ ಬರೆದಿರುವುದಾಗಿ ಹೇಳಿದ್ದಾರೆ. ‘ಇಲ್ಲಿ ದಾಖಲಾಗಿರುವುದು ನನ್ನ ಅಮ್ಮನ ಅನುಭವ ಕಥನವಾಗಿದ್ದರೂ ಪ್ರತೀ ಸಿಂಧಿ ಅಮ್ಮನ ಅನುಭವವೂ ಅದೇ ಆಗಿದೆ’ ಎನ್ನುತ್ತಾರೆ ಸಾಜ್.

ತಮ್ಮ ಮಾತೃಭೂಮಿಯನ್ನು ತುಂಡರಿಸುವ ಅಧಿಕಾರವನ್ನು ಸಿಂಧಿಗಳು ಯಾರಿಗೂ ನೀಡಿರಲಿಲ್ಲ. ಬರ್ಲಿನ್ ಗೋಡೆಯನ್ನು ಒಡೆಯಬಹುದಾದರೆ ಸಿಂಧಿಗಳಿಗೇಕೆ ಅವರ ಮಾತೃಭೂಮಿಯ ದರ್ಶನ ಮಾಡಲು, ಅಲ್ಲಿ ಅವರಿಗೆ ಶಾಶ್ವತವಾಗಿ ನಿಲ್ಲಲು ಅವಕಾಶ ಮಾಡಿಕೊಡುತ್ತಿಲ್ಲ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಕೆಲ ವರ್ಷಗಳ ಹಿಂದೆ ಪತ್ರಕರ್ತ ಸೈಯ್ಯದ್ ಜಲಾಲುದ್ದೀನ್ ಬರೆದ ‘ಡಿವೈಡ್ ಪಾಕಿಸ್ತಾನ ಟು ಎಲಿಮಿನೇಟ್ ಟೆರರಿಸಂ’ ಕೃತಿ ಸಾಕಷ್ಟು ಚರ್ಚೆಗೀಡಾಯಿತು. ‘ಭಯೋತ್ಪಾದನೆ ನಿಮೂಲನೆಯಾಗಬೇಕಾದರೆ ಪಾಕಿಸ್ತಾನವನ್ನು ಮತ್ತೆ ವಿಭಜಿಸುವುದು ಅನಿವಾರ್ಯ’ ಎಂದಿರುವ ಸೈಯ್ಯದ್ ಜಲಾಲುದ್ದೀನ್ ಪಾಕಿಸ್ತಾನದಲ್ಲಿ ಆರು ಹೊಸ ದೇಶಗಳು ತಲೆಎತ್ತಬೇಕು. ಸಿಂಧನ್ನು ಕೂಡ ಪ್ರತ್ಯೇಕ ರಾಷ್ಟ್ರವನ್ನಾಗಿಸಬೇಕು. ಇಲ್ಲದಿದ್ದರೆ ಪಾಕಿಸ್ತಾನ ಭಯೋತ್ಪಾದನೆಯೆಂಬ ಪ್ಲೇಗನ್ನು ಸುತ್ತಮುತ್ತಲ ಪ್ರದೇಶಗಳಿಗೂ ಹರಡುತ್ತದೆ ಎಂದು ಸ್ಪಷ್ಟಶಬ್ದಗಳಲ್ಲಿ ಹೇಳಿದ್ದಾರೆ. ಅಂದರೆ, ಪಾಕಿಸ್ತಾನ ತನ್ನದೇ ಭೂಭಾಗದ ಜನರ ಮೇಲೆ ಯಾವೆಲ್ಲ ರೀತಿಯ ಶೋಷಣೆ, ಅನ್ಯಾಯವೆಸಗುತ್ತಿದೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ಪಾಕ್​ನ ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಸರ್ಕಾರದ ಈ ಧೋರಣೆಯನ್ನು ಗಟ್ಟಿದನಿಯಲ್ಲಿ ವಿರೋಧಿಸುತ್ತಿರುವುದು, ಸಮಾಧಾನ ಮೂಡಿಸಿರುವ ಬೆಳವಣಿಗೆ.

ಕೆಲ ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಘಟನೆಯೊಂದನ್ನು ಇಲ್ಲಿ ದಾಖಲಿಸಲೇಬೇಕು. ಸಿಂಧ್ ಭಾರತದ ಭೂಭಾಗದಲ್ಲಿ ಇಲ್ಲದಿರುವುದರಿಂದ ಆ ಪದವನ್ನು ಭಾರತದ ರಾಷ್ಟ್ರಗೀತೆಯಿಂದ ತೆಗೆದುಹಾಕಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಆಗಿನ ಮುಖ್ಯ ನಾಯಮೂರ್ತಿ ಆರ್.ಸಿ. ಲಾಹೋಟಿ ಅವರ ಪೀಠವು ಈ ವಾದ, ಮನವಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿತಲ್ಲದೆ, ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತು.

ಒಟ್ಟಾರೆ, ಸಿಂಧೂ ಎನ್ನುವುದು ಗಡಿಯ ಪ್ರಶ್ನೆಯಲ್ಲ. ಸಿಂಧೂ ಭಾರತೀಯ ಸಂಸ್ಕೃತಿ, ಜೀವನದರ್ಶನದ ಪ್ರತೀಕವಾಗಿದೆ. ಅಲ್ಲಿ ನೆಲೆಸಿರುವ ಪ್ರತೀ ಸಿಂಧಿಯೂ ಭಾರತವನ್ನು ಪುಣ್ಯಭೂಮಿಯಾಗಿ ಗೌರವದಿಂದ ಕಾಣುತ್ತಾನೆ. ಪಾಕಿಸ್ತಾನ ಸರ್ಕಾರ ತಮ್ಮ ಅಸ್ತಿತ್ವವನ್ನೇ ಮುಗಿಸಲು ಹೊರಟಿದೆ ಎಂಬ ವಾಸ್ತವದ ಅರಿವು ಸಿಂಧಿಗಳಿಗಾಗಿದೆ. ಹಾಗಾಗಿಯೇ, ಅವರು ಪ್ರತ್ಯೇಕ ರಾಷ್ಟ್ರಕ್ಕಾಗಿ ದನಿಯೆತ್ತಿದ್ದಾರೆ. ಈ ದನಿಯನ್ನು ಬೆಂಬಲಿಸುವ, ಅವರಿಗೆ ನ್ಯಾಯವನ್ನು ದೊರಕಿಸಿಕೊಡುವ ಜವಾಬ್ದಾರಿ ಇತರೆಲ್ಲ ದೇಶಗಳಿಗಿಂತಲೂ ಭಾರತಕ್ಕೆ ಹೆಚ್ಚಿಗೆ ಇದೆ. ಅಷ್ಟೇ ಅಲ್ಲ, ಸಿಂಧ್ ಪ್ರತ್ಯೇಕ ರಾಷ್ಟ್ರವಾದರೆ ಪಾಕ್​ನಿಂದ ರಫ್ತಾಗುವ ಭಯೋತ್ಪಾದನೆಗೆ ತಡೆಗೋಡೆ ಒಡ್ಡಿದಂತಾಗುತ್ತದೆ. ಭಯೋತ್ಪಾದನೆ ವಿರುದ್ಧ ಸಮರ ತೀವ್ರಗೊಳಿಸುತ್ತಿರುವ ಭಾರತ ಇಂಥ ಸನ್ನಿವೇಶವನ್ನು ಬಿಟ್ಟುಕೊಡಬಾರದು.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top