ಕ್ಯಾನ್ಸರ್ ರೋಗಿಗೆ ತಲೆಗೂದಲು ದಾನ

 ವಿಜಯವಾಣಿ ಸುದ್ದಿಜಾಲ ಮಂಗಳೂರು
ಸಾಮಾನ್ಯವಾಗಿ ಹೆಣ್ಣುಮಕ್ಕಳು ತುರ್ತು ಸಂದರ್ಭದಲ್ಲೂ ಕೂಡ ತಮ್ಮ ಸೌಂದರ್ಯ ಕೆಡಿಸುವ ಒಂದು ಸಣ್ಣ ಕೆಲಸಕ್ಕೂ ಕೈಹಾಕುವುದಿಲ್ಲ. ಅದರಲ್ಲೂ ಮಾಡೆಲಿಂಗ್ ಕ್ಷೇತ್ರದಲ್ಲಿರುವವರು ಈ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ಆದರೆ ಇಲ್ಲೊಬ್ಬರು ಮಾಡೆಲಿಂಗ್ ಚೆಲುವೆ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನೇ ದಾನ ಮಾಡಿದ್ದಾರೆ.
ಈಕೆ ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ವಸುಧಾ ರಾವ್. ಮೂಲತಃ ಮುರುಡೇಶ್ವರ ನಿವಾಸಿ.ತಿಲಕ್‌ರಾವ್ – ನಮೃತಾ ರಾವ್ ದಂಪತಿ ಪುತ್ರಿ.
ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕೆಂಬ ಕನಸು ಬಾಲ್ಯದಲ್ಲಿಯೇ ಇತ್ತು. ಅದರಂತೆ ಇವರು ಗ್ಲಾಮರ್ ಲೋಕಕ್ಕೆ ಕಾಲಿಟ್ಟರು ಕೂಡ. 2018ರಲ್ಲಿ ನಡೆದ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ವಸುಧಾ ಮಿಸ್ ಫೋಟೊ ಜೆನಿಕ್ ಮತ್ತು ಫಸ್ಟ್ ರನ್ನರ್‌ಆಪ್.
ಎಲ್ಲ ಚೆಲುವೆಯರಿಗಿಂತ ಕೊಂಚ ಭಿನ್ನವಾಗಿ ಕಾಣಿಸಿಕೊಳ್ಳುವ ವಸುಧಾ 2017ರಲ್ಲಿ ಬ್ಲಿಸ್ ಹೇರ್ ಸೆಲೂನ್ ಆಯೋಜಿಸಿದ ಲ್ಯಾಕ್ಸ್ ಆಫ್ ಲವ್ ಅಭಿಯಾನದಡಿ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಕೇಶ ಮುಂಡನ ಮಾಡಿಸಿಕೊಂಡು ಸ್ವಯಂ ಪ್ರೇರಿತರಾಗಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ.
ಕೀಮೋಥೆರಪಿ ಚಿಕಿತ್ಸೆ ಬಳಿಕ ಕೂದಲು ಉದುರಿಕೊಂಡು ಕೀಳರಿಮೆ ಅನುಭವಿಸುತ್ತಿರುವ ಕ್ಯಾನ್ಸರ್ ರೋಗಿಗಳನ್ನು ಕಂಡು ವೈಯುಕ್ತಿಕವಾಗಿ ತಾನು ತುಂಬಾ ನೊಂದಿದ್ದೇನೆ. ಅಂತವರ ನೋವಿನಲ್ಲಿ ಸಣ್ಣ ಪಾಲುದಾರಳಾಗುವ ಬಯಕೆಯಿಂದ ಅಂತವರಿಗಾಗಿಯೇ ಕೂದಲು ದಾನ ಮಾಡುವ ತೀರ್ಮಾನ ಕೈಗೊಂಡೆ ಎಂದು ವಸುಧಾ ‘ವಿಜಯವಾಣಿ’ ಜತೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಕ್ರೀಡೆ, ಭರತನಾಟ್ಯ, ಯೋಗ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ವಸುಧಾ ಅವರಿಗೆ ಸ್ವಂತ ಎನ್‌ಜಿಒ ಸ್ಥಾಪಿಸಿ ಬಡವರ ಸೇವೆ ಮಾಡಬೇಕೆಂಬ ಕನಸಿದೆ.

 

ಕೂದಲು ದಾನ ಮಾಡಿದ ಸಂದರ್ಭದಲ್ಲಿ ಕೂಡ ತಾನು ಎಂದಿನಂತೆ ತರಗತಿ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದೇನೆ. ನನಗೆ ಯಾವುದೇ ಮುಜುಗರ ಅನಿಸಿಲ್ಲ.
ವಸುಧಾ ರಾವ್