ಬೆಂಗಳೂರು:ತೇವಾಂಶ ಭರಿತ ಮೋಡಗಳಿರುವ ಕಾರಣ ರಾಜ್ಯದ ಹಲವೆಡೆ ಸುರಿಯುತ್ತಿರುವ ಬೇಸಿಗೆ ಮಳೆ, ಮುಂದಿನ 4 ದಿನ ಮುಂದುವರಿಯುವ ಸಾಧ್ಯತೆ ಇದೆ.ದಕ್ಷಿಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಗುಡುಗು,ಮಿಂಚು ಮತ್ತು ಆಲಿಕಲ್ಲು ಸಹಿತ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾನುವಾರವೂ ಸಾಧಾರಣ ಪ್ರಮಾಣದಲ್ಲಿ ಮಳೆಯಾಯಿತು. ಹಾಸನ, ಕೊಡಗು, ಚಿಕ್ಕಮಗಳೂರು,ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಮಾ.24ರಿಂದ ಮಾ.27 ರವರೆಗೆ ಹಾಗೂ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮಾ.24ರಂದು ಮಳೆಯಾಗಲಿದೆ. ದಣ ಕನ್ನಡ, ಉಡುಪಿಯಲ್ಲಿ ಮಾ.26ರಿಂದ ಮುಂದಿನ 2 ದಿನ ಹಗುರದಿಂದ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ದಕ್ಷಿಣ ಕರ್ನಾಟಕದ ಹಲವೆಡೆ ಮಳೆಯ ಜೊತೆಗೆ ಬಿರುಗಾಳಿ ಜಾಸ್ತಿ ಇರಲಿದೆ ಎಂದು ಇಲಾಖೆ ಎಚ್ಚರಿಕೆ ಕೊಟ್ಟಿದೆ.
ತಾಪಮಾನ ಏರಿಳಿತ:ಮೋಡ ಕವಿದ ವಾತಾವರಣ,ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಳಿತವಾಗುತ್ತಿದೆ. ಮುಂದಿನ 7 ದಿನ ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ 34-36 ಡಿ.ಸೆ., ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 35-37 ಡಿ.ಸೆ. ಹಾಗೂ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ 38-40 ಡಿ.ಸೆ. ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಬಿಬಿಎಂಪಿ ಸಹಾಯವಾಣಿ 1533ಗೆ ಕರೆ ಮಾಡಿ.. BBMP Helpline