ಮೃತರ ಕುಟುಂಬಗಳಿಗೆ ನರೇಗಾದಿಂದ ತಲಾ 75 ಸಾವಿರ ರೂ. ಪರಿಹಾರ

ಜಿಪಂ ಸಿಇಒ ನಿತೀಶ್ ಕುಮಾರ್ ಭರವಸೆ |ಹೊಸಪೇಟೆ ಆಸ್ಪತ್ರೆಯಲ್ಲಿ ಗಾಯಾಳುಗಳ ಯೋಗ ಕ್ಷೇಮ ವಿಚಾರ | ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಭೇಟಿ, ಸಾಂತ್ವಾನ

ಹೊಸಪೇಟೆ: ಹಾರುವನಹಳ್ಳಿ ಬಳಿಯ ಎನ್‌ಎಚ್ 50ರಲ್ಲಿ ಗುರುವಾರ ಬೆಳಗ್ಗೆ ಟ್ರಾೃಕ್ಟರ್- ಕೆಎಸ್ಸಾರ್ಟಿಸಿ ಬಸ್ ಅಪಘಾತದಲ್ಲಿ ನರೇಗಾ ಕೆಲಸಕ್ಕೆ ತೆರಳುತ್ತಿದ್ದ ಮೂವರು ಕಾರ್ಮಿಕರು ಮೃತ ಪಟ್ಟಿದ್ದು, 35ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಚಿಲಕನಹಟ್ಟಿ ಗ್ರಾಮದ ಯರಿಸ್ವಾಮಿ (35), ರೇಣುಕಾ (40) ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಮಲ್ಲಮ್ಮ (45) ಬಳ್ಳಾರಿ ವಿಮ್ಸ್‌ಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. 35ಕ್ಕೂ ಅಧಿಕ ಗಾಯಾಳುಗಳ ಪೈಕಿ 17 ಜನರನ್ನು ಬಳ್ಳಾರಿ ವಿಮ್ಸ್‌ಗೆ ಕಳುಹಿಸಿದ್ದು, ಶಾಂತಮ್ಮ, ರತ್ನಮ್ಮ, ರವಿ, ಭಾಗ್ಯಮ್ಮ ಸೇರಿ ಇತರರು ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಹಗರಿಬೊಮ್ಮನಹಳ್ಳಿ ಶಾಸಕ ಎಸ್.ಭೀಮಾನಾಯ್ಕ, ಜಿಪಂ ಸಿಇಒ ನಿತೀಶ್ ಕುಮಾರ್, ಎಸಿ ಪಿ.ಎನ್.ಲೋಕೇಶ್, ಎನ್‌ಇಕೆಸ್ಸಾರ್ಟಿಸಿ ವಿಭಾಗಾಧಿಕಾರಿ ಜಿ.ಶೀನಯ್ಯ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು. ಗಾಯಾಳುಗಳಿಗೆ ಶೀಘ್ರವೇ ಚಿಕಿತ್ಸೆ ನೀಡಲು ವೈದ್ಯರಿಗೆ ಶಾಸಕ ಭೀಮಾನಾಯ್ಕ ಸೂಚಿಸಿ, ಹಬೊಹಳ್ಳಿ ಆಸ್ಪತ್ರೆಯಿಂದ ಆಂಬುಲೆನ್ಸ್ ಕಳಿಸಿಕೊಡಲು ವೈದ್ಯರಿಗೆ ದೂರವಾಣಿ ಮೂಲಕ ತಿಳಿಸಿದರು. ಜತೆಗೆ ಗಾಯಾಳುಗಳಿಗೆ ಉಪಾಹಾರದ ವ್ಯವಸ್ಥೆ ಮಾಡಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರು ಮೃತಪಟ್ಟರೆ ಒಬ್ಬರಿಗೆ 75 ಸಾವಿರ ರೂ.ವಿತರಿಸುವಂಥ ಮಾರ್ಗಸೂಚಿಯಿದೆ. ಮೃತರ ಕುಟುಂಬಗಳಿಗೆ ತಲಾ 75 ಸಾವಿರ ರೂ. ಚೆಕ್ ವಿತರಿಸಲಾಗುವುದು. ಕೆಎಸ್ಸಾರ್ಟಿಸಿಯಿಂದ 50 ಸಾವಿರ ರೂ. ಪರಿಹಾರ ನೀಡುತ್ತಿದ್ದು, ತಾತ್ಕಾಲಿಕವಾಗಿ ತಲಾ 15 ಸಾವಿರ ರೂ. ನೀಡಲಾಗುವುದು. ಗಾಯಗೊಂಡ ಕಾರ್ಮಿಕರಿಗೆ ಪರಿಹಾರ ನೀಡುವ ಕುರಿತು ಸರ್ಕಾರದ ಜತೆ ಚರ್ಚಿಸಲಾಗುವುದು. ನರೇಗಾ ಇತಿಹಾಸದಲ್ಲೇ ಇದೇ ಮೊದಲು ಇಂಥ ದುರ್ಘಟನೆ ನಡೆದಿರುವುದು. ಟ್ರಾೃಕ್ಟರ್‌ಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯದಂತೆ ಪಿಡಿಒಗಳಿಗೆ ಸೂಚಿಸಲಾಗುವುದು.
| ನಿತೀಶ್ ಕುಮಾರ್ ಜಿಪಂ ಸಿಇಒ

Leave a Reply

Your email address will not be published. Required fields are marked *