ಬಿಜೆಪಿಯಿಂದ ರಾಜ್ಯಪಾಲರ ಕಚೇರಿ ದುರುಪಯೋಗ, ಸಿಪಿಐಎಂ ಆರೋಪ

ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಘಟಕದ ಕಾರ್ಯಕರ್ತರ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ: ಮೈತ್ರಿ ಸರ್ಕಾರದ ಪತನಕ್ಕೆ ರಾಜ್ಯಪಾಲರು, ಅವರ ಕಚೇರಿಯನ್ನು ಬಿಜೆಪಿ ದುರುಪಯೋಗ ಪಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿಪಿಐಎಂ ತಾಲೂಕು ಘಟಕದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಬೀಳಿಸಿ ಅಧಿಕಾರ ಹಿಡಿಯಲು ಬಿಜೆಪಿ ಹವಣಿಸುತ್ತಿದ್ದು, ಪ್ರಜಾತಂತ್ರ ವಿರೋಧಿಯಾಗಿದೆ. ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರವನ್ನು ಉರುಳಿಸಲು ಮುಂದಾಗಿರುವುದು ಖಂಡನೀಯ. ವಿಧಾನಸಭೆ ಚುನಾವಣೆಯಲ್ಲಿ ಬಹುಮತವಿಲ್ಲದಿದ್ದರೂ ಸಾಬೀತು ಪಡಿಸಲು ಆಪರೇಷನ್ ತಂತ್ರ ಬಳಸಲಾಗಿತ್ತು. ಆದರೆ, ವಿಫಲವಾಯಿತು. ಈಗ ಮತ್ತೆ ಆಪರೇಷನ್ ಕಮಲದ ಮೂಲಕ ವಿಶ್ವಾಸಮತ ಗಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸಮಿತಿ ಸದಸ್ಯೆ ಬಿ.ಮಾಳಮ್ಮ ಮಾತನಾಡಿ, ರಾಜ್ಯದಲ್ಲಿ ಬರವಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರುತ್ತಿವೆ. ಈ ಕುರಿತು ಅಧಿವೇಶನದಲ್ಲಿ ರಚನಾತ್ಮಕ ಚರ್ಚೆಯಲ್ಲಿ ತೊಡಗಿ ಪರಿಹಾರ ಹುಡುಕುವುದು ಬಿಟ್ಟು ಕೇವಲ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆದಿರುವುದು ನಾಚಿಗೇಡಿನ ಸಂಗತಿ ಎಂದು ದೂರಿದರು. ಸಿಪಿಐಎಂ ಕಾರ್ಯಕರ್ತರಾದ ಪಿ.ಚಾಂದಬೀ, ಜಿ.ಸರೋಜಮ್ಮ, ಕೆ.ಅಂಜಿನಮ್ಮ, ಕೆ.ಗಾಳೆಪ್ಪ, ಎಚ್.ಮಂಜುನಾಥ, ಎಂ.ಆನಂದ ಇತರರಿದ್ದರು.

Leave a Reply

Your email address will not be published. Required fields are marked *