ಸಾಗುವಳಿದಾರರಿಗೆ ಪಟ್ಟಾ ನೀಡಲು ತಾಪಂ ಕಚೇರಿ ಮುಂದೆ ಪ್ರಾಂತ ರೈತ ಸಂಘ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ: ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ತಾಪಂ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯಾದ್ಯಂತ ಅರಣ್ಯ ಹಕ್ಕು ಕಾಯ್ದೆಯಡಿ 2,84,625 ಅರಣ್ಯ ಉತ್ಪನ್ನ ಭೂ ಉಳಿಮೆಗಾರರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೇವಲ 16,130 ಅರ್ಜಿಗಳನ್ನು ಪುರಸ್ಕರಿಸಿ, 2,14,710 ಅರ್ಜಿಗಳನ್ನು ತಿರಸ್ಕೃತಗೊಳಿಸಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ ಭೂಮಿ ವಶಪಡಿಸಿಕೊಳ್ಳಲು ಕೋರ್ಟ್ ಆದೇಶ ನೀಡಿತ್ತು. ಇದರಿಂದ ಅರಣ್ಯ ಭೂಮಿ ಅವಲಂಬಿತ ಕುಟುಂಬಗಳು ಆತಂಕದಲ್ಲಿ ಬದುಕುತ್ತಿವೆ. ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯ ಮೇಲ್ಮನವಿ ಪರಿಗಣಿಸಿ ಸುಪ್ರೀಂಕೋರ್ಟ್ ತನ್ನ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗಳನ್ನು ಮರುಪರಿಶೀಲಿಸಿ ಹಕ್ಕುದಾರರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಲೂಕಿನ ದಶಮಾಪುರ ಗ್ರಾಪಂ ವ್ಯಾಪ್ತಿಯ ಬಡಕುಟುಂಬಗಳು 72 ಅರ್ಜಿಗಳನ್ನು ಸಲ್ಲಿಸಿದ್ದು, ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಪರಿಶೀಲಿಸಿ ಅರಣ್ಯ ವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಬಳಿಕ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ದಿನೇಶ್‌ಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ದಶಮಾಪುರ ಗ್ರಾಪಂ, ಹಲಗಾಪುರ ಗ್ರಾಪಂ ವ್ಯಾಪ್ತಿಯ ಬಡ ಕುಟುಂಬಗಳು ಹಕ್ಕುಪತ್ರ ವಿತರಿಸಲು ಅರ್ಜಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಕೆ.ಗಾಳೆಪ್ಪ, ಸಿಐಟಿಯು ಮುಖಂಡ ಎಸ್.ಜಗನ್ನಾಥ, ಸಿ.ಹನುಮಂತಪ್ಪ, ಎಂ.ಆನಂದ, ಎಚ್.ಮಂಜುನಾಥ, ಕಡ್ಲೆಪ್ಪ, ಹುಸೇನ್‌ಪೀರ್, ಜಿ.ಸರೋಜಮ್ಮ, ಸಿ.ಎಂ.ಮಹೇಶ್ವರ ಇತರರಿದ್ದರು.

Leave a Reply

Your email address will not be published. Required fields are marked *