ಹಗರಿಬೊಮ್ಮನಹಳ್ಳಿ: ಸಾರ್ವಜನಿಕ ಸ್ಮಶಾನಕ್ಕಾಗಿ ನಿವೇಶನ ನೀಡುವಂತೆ ಒತ್ತಾಯಿಸಿ ಪಟ್ಟಣದ ಹಳೇ ಊರಿನ ಸಾರ್ವಜನಿಕರು ತಹಸೀಲ್ದಾರ್ ಆರ್.ಕವಿತಾಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಿವೃತ್ತ ಪಿಡಿಒ ಈ.ಕೃಷ್ಣಮೂರ್ತಿ ಮಾತನಾಡಿ, ಹಿಂದುಳಿದ ಮತ್ತು ದಲಿತರ ಶವ ಸಂಸ್ಕಾರಕ್ಕೆ ನಿವೇಶನ ಇಲ್ಲದಂತಾಗಿದೆ. ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈಗಾಗಲೇ ಬಳಕೆಯಲ್ಲಿದ್ದ ಹಗರಿಹಳ್ಳದ ಪಕ್ಕದ ನಿವೇಶನದಲ್ಲಿ ಶವಸಂಸ್ಕಾರಕ್ಕೆ ಒಪ್ಪುತ್ತಿಲ್ಲ. ಆದ್ದರಿಂದ ಸರ್ಕಾರಿ ಭೂಮಿಯನ್ನು ಮರು ಪರಿಶೀಲಿಸಿ ಸೌಲಭ್ಯ ಕಲ್ಪಿಸಬೇಕು ಎಂದರು.
ಪುರಸಭೆ ಸದಸ್ಯ ದೀಪಾಕ್ ಸಾ ಕಠಾರೆ ಮಾತನಾಡಿ, ಮಳೆಬಂದಾಗ ಅಂತ್ಯಸಂಸ್ಕಾರಕ್ಕೆ ಕಷ್ಟಪಡುವಂತಾಗಿದೆ. ಇದರಿಂದಾಗಿ ಜನರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ತಾಲೂಕು ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಹೇಳಿದರು. ತಹಸೀಲ್ದಾರ್ ಆರ್.ಕವಿತಾ ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಉಪತಹಸೀಲ್ದಾರ್ ಶಿವಕುಮಾರಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗೋಟೂರ್ ಬಸವರಾಜ, ಕುರುಹೀನ ಶೆಟ್ಟಿ ಸಮಾಜದ ತಾಲೂಕು ಅಧ್ಯಕ್ಷ ಎಂ.ಮಲ್ಲಣ್ಣ, ಕರವೇ ತಾಲೂಕು ಕಾರ್ಯದರ್ಶಿ ಸಾಲ್ಮನಿ ನಾಗರಾಜ, ಪ್ರಮುಖರಾದ ಉದಯ ಗೋಟೂರ್, ರುದ್ರೇಶ, ಹನುಮಂತ, ಎಸ್.ದೇವರಾಜ, ಚಿತ್ತವಾಡ್ಗಿ ಶಿವಕುಮಾರ ಇತರರಿದ್ದರು.