ಹೂವಿನಹಡಗಲಿ: ಪಟ್ಟಣದ ಗಾಣಿಗರ ಓಣಿಯ ಮನೆಯೊಂದರಲ್ಲಿ ನಕಲಿ ಬೆಣ್ಣೆ ಮತ್ತು ತುಪ್ಪವನ್ನು ತಯಾರಿಸುತ್ತಿದ್ದವರ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಶನಿವಾರ ದಾಳಿ ಮಾಡಿ ನಕಲಿ ಬೆಣ್ಣೆ, ತುಪ್ಪ ಹಾಗೂ ತಯಾರಿಕೆಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದಲ್ಲಿ ಮನೆ ಬಾಡಿಗೆ ತೆಗೆದುಕೊಂಡು ನಕಲಿ ಬೆಣ್ಣೆ ಮತ್ತು ತುಪ್ಪ ತಯಾರಿಸಿ ಮಾರಾಟ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿಯ ಹಿನ್ನಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಗಾಣಿಗರ ಓಣಿಯ ಮನೆಯೊಂದರಲ್ಲಿ ಬೆಣ್ಣೆ ಮತ್ತು ತುಪ್ಪವನ್ನು ತಯಾರಿಸುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿಯೇ ಅಯೋಡಿನ್ ಸೆಲೂಷನ್ ಬಳಸಿ ಪರೀಕ್ಷಿಸಿದಾಗ ಮೇಲ್ನೋಟಕ್ಕೆ ಬೆಣ್ಣೆಯಲ್ಲಿ ಮಿಶ್ರಣ ಇರುವುದು ಖಚಿತವಾಗಿದೆ. ನಂತರ ಬೆಣ್ಣೆ ತಯಾರಕನ್ನು ವಿಚಾರಿಸಿದಾಗ ಬೆಂಗಳೂರಿನಿAದ ಬೆಣ್ಣೆ ಕಳಿಸುತ್ತಾರೆ. ಅದಕ್ಕೆ ವನಸ್ಪತಿಯನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತೇವೆ. ಪಟ್ಟಣ ಸೇರಿದಂತೆ ಹರಪನಹಳ್ಳಿ. ಗದಗ ಜಿಲ್ಲೆಯ ಬೆಳಹಟ್ಟಿ, ಮುಂಡರಗಿಯಲ್ಲಿನ ಡಾಬಾ ಮತ್ತು ಹೋಟಲ್‌ಗಳಿಗೆ ಮಾರಾಟಮಾಡಿರುವುದಾಗಿ ತಿಳಿಸಿದರು. ಆರೋಪಿಗಳು ಬಳ್ಳಾರಿ ತಾಲೂಕಿನ ಮೋಕಾ ಸಮೀಪದ ಬೆಣಕಲ್ ಗ್ರಾಮದ ತಿಪ್ಪೇಸ್ವಾಮಿ, ಶಿವಲಿಂಗಪ್ಪ, ಗೋವಿಂದ, ಶಂಕರ ಎಂಬುವವರು ನಕಲಿ ಬೆಣ್ಣೆ ಮತ್ತು ತುಪ್ಪ ತಯಾರಿಸುತ್ತಿದ್ದರು.
ಅಧಿಕಾರಿಗಳು ದಾಳಿ ಮಾಡುತ್ತಿದಂತೆ ಗೋವಿಂದ ಮತ್ತು ಶಂಕರ ಪರಾರಿಯಾಗಿದ್ದಾರೆ. ಆರೋಪಿಗಳಿಂದ ೧ ಕೆಜಿಯ ೪೦ ಬೆಣ್ಣೆ ಚೀಲ ಮತ್ತು ಐದು ತುಪ್ಪದ ಡಬ್ಬ, ೧೫ ಕೆಜಿಯ ೧ ವನಸ್ಪತಿ ಡಬ್ಬವನ್ನು ವಶಕ್ಕೆ ಪಡೆದಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ಉದಯ್ ಮುದ್ದೆಬಿಹಾಳ್ ಮಾತನಾಡಿ, ನಕಲಿ ಬೆಣ್ಣೆ ತಯಾರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಕಲಬುರ್ಗಿಯ ಮುಖ್ಯ ಆಹಾರ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ಮಾಡಿದ ಕಾರಣಕ್ಕೆ ಪುರಸಭೆಯಿಂದ ೧ ಸಾವಿರ ದಂಢ ವಿಧಿಸಲಾಯಿತು. ದಾಳಿಯಲ್ಲಿ ಪುರಸಭೆಯ ಪರಿಸರ ಅಭಿಯಂತರ ಅಮರೇಶ, ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ ಹಾಗೂ ಇತರರಿದ್ದರು.