ಪ್ಲೇ ಸ್ಕೂಲ್ ಮಕ್ಕಳಲ್ಲಿ ಎಚ್1ಎನ್1 ಸೋಂಕು

 <<ಒಂಬತ್ತು ಮಕ್ಕಳು ಸಹಿತ 12ಮಂದಿಗೆ ಜ್ವರ * ಇಬ್ಬರ ರಕ್ತ ಪರೀಕ್ಷೆಯಲ್ಲಿ ಧೃಢ>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ಬಿಜೈ ಪ್ಲೇ ಸ್ಕೂಲ್ ಒಂದರ ಒಂಬತ್ತು ಮಕ್ಕಳು, ಸಂಸ್ಥೆಯ ಮುಖ್ಯಸ್ಥೆ ಸಹಿತ 12 ಮಂದಿಯಲ್ಲಿ ಶೀತ ಜ್ವರ ಕಾಣಿಸಿಕೊಂಡಿದ್ದು, ಇವರಲ್ಲಿ ಇಬ್ಬರು ಮಕ್ಕಳಲ್ಲಿ ಎಚ್1ಎನ್1 ಸೋಂಕು ಇರುವುದು ರಕ್ತ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪ್ಲೇ ಸ್ಕೂಲ್‌ಗೆ 10 ದಿನ ರಜೆ ನೀಡಲಾಗಿದೆ. ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಮಂಗಳವಾರ ಪ್ಲೇ ಸ್ಕೂಲ್‌ಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ಲೇ ಸ್ಕೂಲ್‌ನಲ್ಲಿ ಒಟ್ಟು 75 ಮಕ್ಕಳು ಇದ್ದಾರೆ.
ಪುಟಾಣಿಯೋರ್ವನಿಂದ ಶಾಲೆಯ ಮಕ್ಕಳಿಗೆ ಈ ಸೋಂಕು ಹರಡಿತ್ತು ಎಂದು ತಿಳಿದುಬಂದಿದೆ. ಸಂಸ್ಥೆಯ ಮುಖ್ಯಸ್ಥೆ ಹಾಗೂ ಇಬ್ಬರು ಶಿಕ್ಷಕಿಯರು ಕೂಡ ಜ್ವರದಿಂದ ಬಳಲುತ್ತಿದ್ದು, ಮಂಗಳವಾರ ರಕ್ತ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಪ್ಲೇ ಸ್ಕೂಲ್ ಸಂಸ್ಥೆ ಜತೆ ಸಂಪರ್ಕದಲ್ಲಿದ್ದಾರೆ. ಸ್ಕೂಲ್ ಮೂಲಕ ಜ್ವರ ಬಾಧಿತ ಮಕ್ಕಳ ಬಗ್ಗೆ ಮಾಹಿತಿ ಪಡೆದು ಮಕ್ಕಳಿಗೆ ಚಿಕಿತ್ಸೆ ಹಾಗೂ ಮಾರ್ಗದರ್ಶನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ನವೀನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಎಚ್1ಎನ್1 ಬಾಧಿತರಲ್ಲಿ ಎ, ಬಿ, ಸಿ ಎಂದು ಮೂರು ವಿಭಾಗಗಳಿದ್ದು, ಎ- ವಿಭಾಗದಲ್ಲಿ ಸಾಮಾನ್ಯ ಜ್ವರದಂತೆ ಸೋಂಕು ಬಂದು ಹೋಗುತ್ತದೆ. ಬಿ- ವಿಭಾಗದಲ್ಲಿ ಒಳಪಡುವವರಿಗೆ ಚಿಕಿತ್ಸೆ ಅವಶ್ಯವಿರುತ್ತದೆ. ಸಿ- ವಿಭಾಗಕ್ಕೆ ಒಳಪಡುವವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸಾಮಾನ್ಯವಾಗಿ ಎಚ್1 ಎನ್1 ಬಾಧಿತರಾಗುವವರಲ್ಲಿ ಶೇ.90 ಜನರು ಎ ಮತ್ತು ಬಿ- ವಿಭಾಗಕ್ಕೆ ಒಳಪಡುವವರು ಎಂದು ವಿವರಿಸಿದ್ದಾರೆ.

ಆತಂಕ ಮೂಡಿಸಿದ್ದ ಜ್ವರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಎಚ್1ಎನ್1 ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದರು.16 ದಿನಗಳಲ್ಲಿ ಸಜಿಪನಡು ಮಯ್ಯದ್ದಿ ಅವರ ಕುಟುಂಬವೊಂದರಲ್ಲೇ ಎಚ್1ಎನ್1 ಬಾಧಿತ ಇಬ್ಬರು ಮೃತಪಟ್ಟಿದ್ದರು.