ಎಚ್1ಎನ್1 ತಡೆಗೆ ಕ್ರಮ

ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಎಚ್1ಎನ್1 ಸೋಂಕು ಹರಡಿದ್ದು, ಈಗಾಗಲೇ 81 ಸಂಶಯಾಸ್ಪದ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 12 ಪ್ರಕರಣಗಳು ಖಚಿತಗೊಂಡ ಹಿನ್ನೆಲೆ ಈ ಸೋಂಕು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಎಚ್1ಎನ್1 ಮುಂಜಾಗ್ರತಾ ಕ್ರಮ ಕೈಗೊಳ್ಳವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಕುರಿತು ಆಯಾ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್. ದೇಸಾಯಿ ಮಾತನಾಡಿ, ಎಚ್1ಎನ್1ಗೆ ಸಂಬಂಧಿ ಸಿದಂತೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸೆನ್ಸಿಟಿವ್ ವಾರ್ಡ್​ಗಳನ್ನು ಮಾಡಲಾಗಿದ್ದು, ಸೋಂಕು ಹರಡಿದ ವ್ಯಾಪ್ತಿಯಲ್ಲಿ ರಕ್ತದ ಮಾದರಿ ತೆಗೆದುಕೊಳ್ಳಲಾಗುತ್ತಿದೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಕುರಿತು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಲಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಡಂಗೂರ, ಬಿತ್ತಿಪತ್ರ, ಪೋಸ್ಟರ್ಸ್ ಹಾಗೂ ಬ್ಯಾನರ್​ಗಳನ್ನು ಹಾಕಲಾಗುತ್ತಿದೆ ಎಂದು ತಿಳಿಸಿದರು.

ತಾಯಂದಿರ ಸಭೆ, ಗುಂಪು ಸಭೆ, ಧ್ವನಿವರ್ಧಕ ಮೂಲಕ ಅರಿವು ಮೂಡಿಸಲಾ ಗುತ್ತಿದೆ. ಕೇಬಲ್ ಟಿವಿಗಳಲ್ಲಿ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಬಾಗಲಕೋಟೆ, ಹುನಗುಂದ ಹಾಗೂ ಮುಧೋಳ ತಾಲೂಕುಗಳಲ್ಲಿ ಹೆಚ್ಚಾಗಿ ಕಂಡುಬಂದಿದ್ದರಿಂದ ಆ ಭಾಗದಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುವುದು. 2016-17 ರಲ್ಲಿ 24 ಸಂಶಯಾಸ್ಪದ ಪ್ರಕರಣಗಳಲ್ಲಿ 1 ಖಚಿತಪಟ್ಟರೆ, 2017-18 ರಲ್ಲಿ 198 ಪೈಕಿ 48 ಹಾಗೂ 2018-19 ರಲ್ಲಿ 80 ಪೈಕಿ 12 ಖಚಿತ ಪ್ರಕರಣ ದಾಖಲಾಗಿವೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪವಾಡೆಪ್ಪ ಮಾತನಾಡಿ, ಎಚ್1ಎನ್1 ಇದೊಂದು ವೈರಸ್​ನಿಂದ ಹರಡುವ ರೋಗವಾಗಿದ್ದು, ಸಾಮಾನ್ಯ ಜ್ವರ, ಕೆಮ್ಮು, ನೆಗಡಿ ಮತ್ತು ವಾಕರಿಕೆ, ಹಳದಿ ಕಫ, ಅತೀ ಭೇದಿ ಅಥವಾ ವಾಂತಿ, ಗಂಟಲು ಕೆರೆತ, ಅತಿಯಾದ ಮೈ ಕೈ ನೋವು, ಸ್ವಲ್ಪ ಮಟ್ಟಿನ ಉಸಿರಾಟದ ಸಮಸ್ಯೆ, ಕಫದಲ್ಲಿ ರಕ್ತ, ಉಬ್ಬಸ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಸಿಇಒ ಗಂಗೂಬಾಯಿ ಮಾನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಹಾದಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜ ಶಿರೂರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಯಶ್ರೀ ಎಮ್ಮಿ ಸೇರಿ ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.