More

  ವಿಶ್ವನಾಥ್​ಗೂ ಅವಕಾಶ?: ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರಧಾನಿ ಮೋದಿ ಮೇಲೆ ಒತ್ತಡ

  ಬೆಂಗಳೂರು: ಸೋತವರನ್ನು ಸಂಪುಟಕ್ಕೆ ಸೇರಿಸಲು ಸಾಧ್ಯವಿಲ್ಲವೆಂದು ಬಿಜೆಪಿಯಲ್ಲಿ ಅನೇಕ ಮುಖಂಡರು ಹೇಳುತ್ತಿದ್ದರೂ, ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಕೇಂದ್ರದಲ್ಲಿ ಸಚಿವರಾಗಿರುವ ಮಧ್ಯಪ್ರದೇಶದ ನರೇಂದ್ರ ಸಿಂಗ್ ತೋಮರ್ ಅವರು ವಿಶ್ವನಾಥ್ ಪರ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ತರುತ್ತಿದ್ದಾರೆ. ಮೋದಿ ಅವರು ತೋಮರ್ ಮಾತನ್ನು ಕೇಳುವುದರಿಂದ ಅವಕಾಶದ ಸಾಧ್ಯತೆಗಳಿವೆ ಎಂದು ರಾಜ್ಯ ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ.

  ವಿಶ್ವನಾಥ್ ಜೆಡಿಎಸ್​ನ ರಾಜ್ಯಾಧ್ಯಕ್ಷರಾಗಿದ್ದು ರಾಜೀನಾಮೆ ನೀಡಿ ಪಕ್ಷಕ್ಕೆ ಬಂದಿದ್ದಾರೆ, ಕುರುಬ ಸಮುದಾಯಕ್ಕೆ ಸೇರಿದ ನಾಯಕ. ಅವರನ್ನು ಸಚಿವರನ್ನಾಗಿ ಮಾಡಿದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗಿರುವ ಕುರುಬ ಸಮಾಜವನ್ನು ಬಿಜೆಪಿ ಕಡೆ ಸೆಳೆಯಬಹುದು. ವಿಶ್ವನಾಥ್ ಆಪರೇಷನ್ ಕಮಲದ ನೇತೃತ್ವ ವಹಿಸಿದ್ದವರು. ಅವರನ್ನು ಸಂಪುಟಕ್ಕೆ ಸೇರಿಸುವುದು ನ್ಯಾಯ ಎಂದು ಮೋದಿ ಅವರಿಗೆ ತೋಮರ್ ಮನವೊಲಿಸಿದ್ದಾರೆಂದು ಹೇಳಲಾಗುತ್ತಿದೆ.

  ವಿಶ್ವನಾಥ್​ರನ್ನು ಬಿಜೆಪಿಗೆ ಕರೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ತೋಮರ್ ಒಳ್ಳೆಯ ಸ್ನೇಹಿತರಾಗಿದ್ದಾರೆ. ಆದ್ದರಿಂದಲೇ ಪ್ರಸಾದ್, ತೋಮರ್​ಗೆ ಮೋದಿ ಮೇಲೆ ಒತ್ತಡ ತರುವಂತೆ ಮನವೊಲಿಸಿದ್ದಾರೆಂದು ಮೂಲಗಳು ತಿಳಿಸಿವೆ. ಆದರೆ ರಾಜ್ಯ ಮುಖಂಡರು ಹಾಗೂ ಶಾಸಕರಿಂದ ವಿರೋಧ ಹೆಚ್ಚಾದರೆ, ಆಗ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯ ಬಿಜೆಪಿ ಮುಖಂಡರು ಹಾಗೂ ಉಪಚುನಾವಣೆಯಲ್ಲಿ ಗೆದ್ದ ಶಾಸಕರು ಸೋತವರಿಗೆ ಅವಕಾಶ ನೀಡುವ ಬಗ್ಗೆ ಅಪಸ್ವರ ತೆಗೆಯುತ್ತಿದ್ದರು. ವರಿಷ್ಠರು ಈಗಾಗಲೇ ರಾಜ್ಯದ ಮುಖಂಡರಿಗೆ ವಿಶ್ವನಾಥ್ ಸೇರ್ಪಡೆ ಬಗ್ಗೆ ಸಿದ್ದರಿರುವಂತೆ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ. ಆದ್ದರಿಂದಲೇ ಗೆದ್ದ ಎಲ್ಲ ರಿಗೂ ಸಂಪುಟದಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನಲಾಗಿದೆ.

  ಸೋತವರನ್ನು ಡಿಸಿಎಂ ಮಾಡಿಲ್ಲವೇ?

  ಮೈಸೂರು: ಸೋತರು ಅನ್ನೋ ಕಾರಣಕ್ಕೆ ನಮ್ಮನ್ನು ದೂರ ಮಾಡುತ್ತೀರಾ? ಎಂದು ಮಾಜಿ ಶಾಸಕ ಎಚ್.ವಿಶ್ವನಾಥ್ ಗುಡುಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು, ಸವದಿ ಡಿಸಿಎಂ ಆಗಲು ಯಾರು ಕಾರಣ? ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರಲು ಯಾರು ಕಾರಣ? ಎಂದು ಅವರು ಮಾದ್ಯಮದವರನ್ನು ಪ್ರಶ್ನಿಸಿದರು.

  17 ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾಗಿದ್ದು, ಇವರೆಲ್ಲರನ್ನೂ ಮಂತ್ರಿ ಮಾಡುತ್ತೀವಿ ಎಂದು ಭರವಸೆ ನೀಡಲಾಗಿತ್ತು. ಈಗ ಚುನಾವಣೆಯಲ್ಲಿ ಸೋತಿರಲಿ, ಗೆದ್ದಿರಲಿ ಅವರನ್ನು ಸಚಿವರನ್ನಾಗಿ ಮಾಡುವ ಬದ್ಧತೆಯನ್ನು ಸಿಎಂ ಪ್ರದರ್ಶಿಸಬೇಕು. ಇದು ನ್ಯಾಯಸಮ್ಮತವಾಗಿದೆ ಎಂದರು. ನಾಲಿಗೆಯ ಮೇಲೆ ನಿಂತಿರುವ ಒಬ್ಬರೇ ನಾಯಕರೆಂದರೆ ಅದು ಯಡಿಯೂರಪ್ಪ. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಸೋತವರನ್ನು ಮಂತ್ರಿ ಮಾಡಿದ ಉದಾಹರಣೆಗಳಿವೆ. ಸೋತ ಅರುಣ್ ಜೇಟ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದರು. ಅಷ್ಟೇ ಏಕೆ ಡಿಸಿಎಂ ಲಕ್ಷ್ಮ್ಮ ಸವದಿ ಸೋತಿಲ್ಲವೇ? ಅವರನ್ನು ಸಚಿವರನ್ನಾಗಿ ಮಾಡುತ್ತೀರಿ. ಹಾಗೆಯೇ ನಮಗೂ ನೀಡಿ. ನಿಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದು ಹೇಳಿದರು. ‘ಸೋತವರಿಗೆ ಸಚಿವ ಸ್ಥಾನ ಕಷ್ಟ’ ಎಂದ ಡಾ.ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಹೇಳಿಕೆಗೆ, ಯಾವ ಅರ್ಥದಲ್ಲಿ ಅವರು ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ನಮ್ಮ ತಂಡದ ನಾಯಕ ರಮೇಶ್ ಜಾರಕಿಹೊಳಿ ನನ್ನ ಪರ ಇದ್ದಾರೆ ಎಂದರು.

  17 ಶಾಸಕರ ತಾಳ್ಮೆ ಪರೀಕ್ಷೆ ಮಾಡಬಾರದು

  ಕಾಂಗ್ರೆಸ್-ಜೆಡಿಎಸ್​ಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿರುವ 17 ಜನರ ತಾಳ್ಮೆ ಪರೀಕ್ಷೆ ಮಾಡಬಾರದು. ಕೂಡಲೇ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಆಗ್ರಹಿಸಿದರು. ಪಕ್ಷಕ್ಕೆ ಬರಮಾಡಿಕೊಳ್ಳುವ ಸಂದರ್ಭ ಅವರೊಂದಿಗೆ ವೈಯಕ್ತಿಕವಾಗಿ ಸಮಾಲೋಚನೆ ನಡೆಸಲಾಗಿತ್ತು. ಆಗ ಎಲ್ಲರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಹೀಗಾಗಿ ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಸರ್ಕಾರ ರಚನೆಗೆ ಕಾರಣರಾದ 17 ಜನರ ಬಗ್ಗೆ ಹೈಕಮಾಂಡ್​ಗೆ ಮನದಟ್ಟು ಮಾಡಿಕೊಡಬೇಕು ಎಂದರು.

  ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಿಗೆ ಮಂತ್ರಿಸ್ಥಾನ ನೀಡುವುದು, ಹಾಲಿ ಡಿಸಿಎಂಗಳನ್ನು ಮುಂದುವರಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಪಕ್ಷ ಎಂದರೆ ತಾಯಿ ಇದ್ದಂತೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು.

  | ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ

  ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿ ಮತ್ತು ನನಗೆ ಆ ಸ್ಥಾನ ನೀಡುವುದು, ಬಿಡುವುದು ವರಿಷ್ಠರಿಗೆ ಬಿಟ್ಟದ್ದು. ಅವರ ನಿರ್ಧಾರಕ್ಕೆ ನಾನು ಬದ್ಧ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ನಾನೂ ಹೊರತಾಗಿಲ್ಲ. ವಾಲ್ಮೀಕಿ ಗುರುಗಳು ಹೋರಾಟ ಕೈಬಿಡುವ ವಿಚಾರ ನನಗೆ ತಿಳಿದಿಲ್ಲ.

  | ಬಿ.ಶ್ರೀರಾಮುಲು ಆರೋಗ್ಯ ಸಚಿವ

  ಮಾಜಿ ಸಚಿವ ಎಚ್.ವಿಶ್ವನಾಥ್ ಸೂಕ್ತ ವೇದಿಕೆಯಲ್ಲಿ ಸಂಬಂಧಪಟ್ಟವರ ಎದುರು ನೋವು ಹೇಳಿಕೊಳ್ಳ ಬೇಕು, ಅದರ ಬದಲಿಗೆ ಬಹಿರಂಗವಾಗಿ ಮಾಧ್ಯಮಗಳ ಎದುರು ಅಸಮಾ ಧಾನ ವ್ಯಕ್ತಪಡಿಸುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ. ವಿಶ್ವನಾಥ್ ಅವರ ಹಿತ ಬಯಸುವವರಲ್ಲಿ ನಾನೂ ಒಬ್ಬ.

  | ಡಾ ಕೆ.ಸುಧಾಕರ್ ಶಾಸಕ 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts