ವಕೀಲರೊಂದಿಗೆ ಚರ್ಚಿಸಲು ದೆಹಲಿಗೆ ಹೊರಟ ಎಚ್.ವಿಶ್ವನಾಥ್

ಮೈಸೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಚ್.ವಿಶ್ವನಾಥ್ ಅವರು ಬುಧವಾರ ದೆಹಲಿಗೆ ತೆರಳಿದ್ದು, ಇದು ತೀವ್ರ ಕುತೂಹಲ ಮೂಡಿಸಿದೆ.

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವ ಅನರ್ಹಗೊಂಡಿರುವ ಶಾಸಕರ ಪ್ರಕರಣದ ಕುರಿತು ವಕೀಲರೊಂದಿಗೆ ಚರ್ಚಿಸಲು ತೆರಳಿದ್ದಾರೆ ಎನ್ನಲಾಗಿದೆ. ದೆಹಲಿಗೆ ಹೊರಡುವ ಮುನ್ನ ಅವರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಪಕ್ಷದ ವಿಪ್ ಉಲ್ಲಂಘಿಸಿದ ಕಾರಣಕ್ಕೆ ವಿಶ್ವನಾಥ್ ಸೇರಿ 17 ಶಾಸಕರನ್ನು ಹಿಂದಿನ ಸ್ಪೀಕರ್ ರಮೇಶ್‌ಕುಮಾರ್ ಅನರ್ಹಗೊಳಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಇವರೆಲ್ಲ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದಾರೆ.

ಆದರೆ, ಇವರ ಅರ್ಜಿಯ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠ ಈಗಾಗಲೇ ಸ್ಪಷ್ಟಪಡಿಸಿದೆ. ಶೀಘ್ರದಲ್ಲಿ ವಿಚಾರಣಾ ದಿನಾಂಕ ನಿಗದಿಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ವಕೀಲರೊಂದಿಗೆ ಚರ್ಚಿಸಲು ವಿಶ್ವನಾಥ್ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.